ಪೊಕ್ಸೊ ಪ್ರಕರಣ: ಆರೋಪಿಗೆ 10ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಬಸಪ್ಪ
ಉಡುಪಿ, ಸೆ.25: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೂವರೆ ವರ್ಷದ ಹಿಂದೆ ಹೆಣ್ಣು ಮಗುವಿನ ಮೇಲೆ ಲೈಂಗಿಕ ಹಲ್ಲೆ ನಡೆಸಿರುವ ಪ್ರಕರಣದ ಆರೋಪಿ ಬಸಪ್ಪ(72)ಗೆ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯವು 10ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.
2018ರ ಫೆ.6ರಂದು ಅಂಗನವಾಡಿಯಿಂದ ಮನೆಗೆ ಬೇಗ ಬಂದ ನಾಲ್ಕು ವರ್ಷದ ಹೆಣ್ಣು ಮಗುವಿನ ಮೇಲೆ ಅವರ ಸಂಬಂಧಿ ಹಾಗೂ ನೆರೆಮನೆಯ ಬಸಪ್ಪ ಲೈಂಗಿಕ ಹಲ್ಲೆ ನಡೆಸಿದ್ದನು. ಈ ಬಗ್ಗೆ ಸಂತ್ರಸ್ತ ಮಗುವಿನ ತಾಯಿ ಫೆ.7ರಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಫೆ.8ರಂದು ಪೊಲೀಸರು ಪೋಕ್ಸೋ ಕಾಯಿದೆಯಡಿ ಆರೋಪಿಯನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ನ್ಯಾಯಾಧೀಶ ಸಿ.ಎಂ. ಜೋಷಿ, ಸೆ.23ರಂದು ಆರೋಪಿಯನ್ನು ದೋಷಿ ಎಂಬುದಾಗಿ ಆದೇಶ ನೀಡಿ, ಸೆ.25ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಆದೇಶದಲ್ಲಿ ತಿಳಿಸಿದ್ದರು. ಅದರಂತೆ ಇಂದು ಆರೋಪಿಗೆ 10ವರ್ಷ ಕಠಿಣ ಸಜೆ ಮತ್ತು 1000ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಮೂರು ತಿಂಗಳ ಕಾಲ ಸಾದಾ ಸಜೆ ವಿಧಿಸಿ ಆದೇಶ ಹೊರಡಿಸಲಾಗಿದೆ.
ಸಂತ್ರಸ್ತ ಕುಟುಂಬ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಪರಿಹಾರವನ್ನು ಪಡೆದುಕೊಳ್ಳುವಂತೆ ಜಿಲ್ಲಾ ವಿಶೇಷ ನ್ಯಾಯಾಧೀಶರು ಶಿಫಾರಸ್ಸು ಮಾಡಿದ್ದಾರೆ. ಅಭಿಯೋಜನೆ ಪರವಾಗಿ ವಿಶೇಷ ಜಿಲ್ಲಾ ಸರಕಾರಿ ಅಭಿಯೋಜ ವಿಜಯ ವಾಸು ಪೂಜಾರಿ ವಾದಿಸಿದ್ದರು.
ವಿಚಾರಣೆ ಮಧ್ಯೆ ಆರೋಪಿ ಬಸಪ್ಪಗೆ ಉಡುಪಿ ಜಿಲ್ಲಾ ವಿಶೇಷ ನ್ಯಾಯಾ ಲಯವು ಜಾಮೀನು ಮಂಜೂರು ಮಾಡಿತ್ತು. ಆದರೆ ಆರೋಪಿಯ ಮನೆಯವರು ಆತನಿಗೆ ಭದ್ರತಾ ಹಣ ನೀಡಲು ಮುಂದೆ ಬಾರದ ಕಾರಣ ಬಸಪ್ಪ ಜೈಲಿನಿಂದಲೇ ಬಿಡುಗಡೆಗೊಳ್ಳದೆ, ನ್ಯಾಯಾಂಗ ಬಂಧನದಲ್ಲಿ ಇದ್ದುಕೊಂಡೇ ವಿಚಾರಣೆಯನ್ನು ಎದುರಿಸಿದ್ದನು ಎಂದು ಮೂಲಗಳು ತಿಳಿಸಿವೆ.







