ಮಾರುತಿಯ ಆಯ್ದ ಕಾರುಗಳ ಎಕ್ಸ್ ಶೋ ರೂಂ ಬೆಲೆ 5,000 ರೂ.ವರೆಗೆ ಇಳಿಕೆ

ಹೊಸದಿಲ್ಲಿ, ಸೆ. 25: ಮಾರುತಿ ಸುಝುಕಿ ಇಂಡಿಯಾ ಕಂಪೆನಿ ಬುಧವಾರದಿಂದ ಜಾರಿಗೆ ಬರುವಂತೆ ತನ್ನ ಕೆಲವು ಕಾರಿನ ಮಾದರಿಗಳ ಎಕ್ಸ್ ಶೋರೂಂ ಬೆಲೆಯಲ್ಲಿ 5 ಸಾವಿರ ರೂ. ವರೆಗೆ ಇಳಿಕೆ ಮಾಡಿದೆ.
ಆಲ್ಟೋ 800, ಆಲ್ಟೊ ಕೆ10, ಸ್ವಿಫ್ಟ್ ಡೀಸೆಲ್, ಸೆಲೆರಿಯೊ, ಬಲೇನೋ ಡೀಸೆಲ್, ಇಗ್ನಿಸ್ ಡಿಝೈರ್ ಡೀಸೆಲ್, ಟೂರ್ ಎಸ್ ಡೀಸೆಲ್, ವಿಟರಾ ಬ್ರಿಝ್ಝಿ ಹಾಗೂ ಎಸ್-ಕ್ರಾಸ್ ಮೊದಲಾದ ಮಾದರಿಯ ಕಾರುಗಳ ಬೆಲೆ ಇಳಿಕೆ ಮಾಡಲಾಗಿದೆ ಎಂದು ಕಂಪೆನಿ ಹೇಳಿದೆ.
ಈ ಮಾದರಿ ಕಾರುಗಳ ಬೆಲೆ 2.93 ಲಕ್ಷ ರೂಪಾಯಿಯಿಂದ 11.49 ಲಕ್ಷ ರೂಪಾಯಿ ವರೆಗೆ ಇದೆ. ಸೆಪ್ಟಂಬರ್ 25ರಿಂದ ನೂತನ ಬೆಲೆ ಜಾರಿಗೆ ಬಂದಿದೆ ಎಂದು ಕಂಪೆನಿ ಹೇಳಿದೆ. ದೇಶೀಯ ಉತ್ಪಾದನಾ ಕಂಪೆನಿಗಳ ಶೇ. 30ರಿಂದ ಶೇ. 20ಕ್ಕೆ ಹಾಗೂ ನೂತನ ಕಂಪೆನಿಗಳ ಶೇ. 25ರಿಂದ ಶೇ. 15ಕ್ಕೆ ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಬಳಿಕ ಮಾರುತಿ ಸುಝುಕಿ ಇಂಡಿಯಾ ಕಂಪೆನಿ ಈ ನಿರ್ಧಾರ ತೆಗೆದುಕೊಂಡಿದೆ.
ನಿಧಾನವಾಗುತ್ತಿರುವ ಭಾರತದ ಆರ್ಥಿಕತೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಕಾರ್ಪೊರೇಟ್ ತೆರಿಗೆಯನ್ನು ಕೇಂದ್ರ ಸರಕಾರ ಇಳಿಕೆ ಮಾಡಿತ್ತು. ಗ್ರಾಹಕರ ಭಾವನೆಗಳನ್ನು ಉತ್ತೇಜಿಸಲು ಹಾಗೂ ಹಬ್ಬದ ಸಂದರ್ಭ ಮಾರುಕಟ್ಟೆಯಲ್ಲಿ ಬೇಡಿಕೆ ಪುನಶ್ಚೇತನಗೊಳಿಸುವಲ್ಲಿ ಈ ಬೆಲೆ ಇಳಿಕೆ ಅವಕಾಶ ಮಾಡಿಕೊಡಲಿದೆ ಎಂದು ಮಾರುತಿ ಸುಝುಕಿ ಇಂಡಿಯಾ ಕಂಪೆನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.