ಉಡುಪಿ: ರಕ್ತಹೀನತೆ ಪ್ರಮಾಣವನ್ನು ಸೊನ್ನೆಗೆ ಇಳಿಸುವ ಗುರಿ; ಡಿಎಚ್‌ಓ ಡಾ.ಅಶೋಕ್

ಉಡುಪಿ, ಸೆ.25: ಜಂತುಹುಳ ನಿವಾರಣಾ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಕಂಡು ಬರುವ ರಕ್ತ ಹೀನತೆಯ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕ್ ತಿಳಿಸಿದ್ದಾರೆ.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯ ದಲ್ಲಿ, ನಗರದ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ದೇಶದಲ್ಲಿ ಒಂದರಿಂದ 19 ವರ್ಷವರೆಗಿ ಪ್ರಾಯದ ಶೇ.50ರಷ್ಟು ಮಕ್ಕಳಲ್ಲಿ ಜಂತುಹುಳುವಿನ ಕಾರಣದಿಂದ ಪೌಷ್ಠಿಕಾಂಶದ ಕೊರತೆಯಾಗಿ, ರಕ್ತ ಹೀನತೆ ಕಂಡುಬಂದಿದೆ. ಇದರಿಂದ ಮಕ್ಕಳ ಶಾರೀರಿಕ ಮತ್ತು ಭೌದ್ಧಿಕ ಬೆಳವಣಿಗೆ ಮೇಲೆ ಸಹ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಮಕ್ಕಳಿಗೆ ಕಡ್ಡಾಯವಾಗಿ ಜಂತುಹುಳು ನಿವಾರಣೆಯ ಅಲ್ಬೇಂಡಾಜೋಲ್ ಮಾತ್ರೆಗಳನ್ನು ನೀಡುವ ಮೂಲಕ ಅವರಲ್ಲಿ ರುವ ರಕ್ತ ಹೀನತೆಯ ಪ್ರಮಾಣವನ್ನು ಶೂನ್ಯಕ್ಕೆ ತರಲು ಸಾದ್ಯವಾಗಲಿದೆ ಎಂದವರು ವಿವರಿಸಿದರು.
ಉಡುಪಿ ಜಿಲ್ಲೆಯಲ್ಲಿ 2,67,450 ಮಕ್ಕಳಿಗೆ ಈ ಮಾತ್ರೆ ನೀಡುವ ಗುರಿ ಇದ್ದು, ಈ ಹಿಂದೆ ಎಷ್ಟೇ ಬಾರಿ ಮಾತ್ರೆ ತೆಗೆದುಕೊಂಡಿದ್ದರೂ, ಪ್ರಸ್ತುತ ಎಲ್ಲಾ ವಿದ್ಯಾರ್ಥಿಗಳೂ ಈ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಮಾತ್ರೆ ವಿತರಣೆಯಲ್ಲಿ ಯಾವುದೇ ಮಗು ಹೊರಗುಳಿಯದಂತೆ ಜಿಲ್ಲೆಯಲ್ಲಿ ಶೇ.100 ಸಾಧನೆ ಯಾಗಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಾಗಿದೆ ಎಂದು ಡಾ.ಅಶೋಕ್ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಶೋಕಮಾತಾ ಚರ್ಚ್‌ನ ಧರ್ಮಗುರು ಫಾ.ವಲೇರಿಯನ್ ಮೆಂಡೋನ್ಸಾ, ಯಾವುದೇ ಮಗು ರಕ್ತ ಹೀನತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಸರಕಾರ ಜಾರಿಗೆ ತಂದಿರುವ ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿ ಸಮುದಾಯದಲ್ಲಿ ರಕ್ತ ಹೀನತೆ ನಿವಾರಣೆಯಾಗಿ, ಎಲ್ಲಾ ವಿದ್ಯಾರ್ಥಿಗಳು ಆರೋಗ್ಯ ಭಾಗ್ಯ ಪಡೆಯ ಬೇಕು. ಸದೃಢ ಆರೋಗ್ಯ ಇದ್ದಲ್ಲಿ ಕಲಿಯುಕೆಯಲ್ಲಿ ಚೆನ್ನಾಗಿ ಮುಂದುವರಿಯಬಹುದು. ಆದ್ದರಿಂದ ವೈದ್ಯರ ಶಿಫಾರಸ್ಸುಗಳನ್ನು ಚಾೂ ತಪ್ಪದೇ ಪಾಲಿಸಬೇಕು ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಮಾತನಾಡಿದರು. ಜಿಲ್ಲಾ ಆರ್‌ಸಿ ಹೆಚ್ ಅಧಿಕಾರಿ ಡಾ. ಎಂ.ಜಿ. ರಾಮ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್, ಶಿಕ್ಷಣ ಇಲಾಖೆಯ ಜಾಹ್ನವಿ, ಸೈಂಟ್ ಮೇರಿಸ್ ಶಾಲೆಯ ಮುಖ್ಯೋಪಾದ್ಯಾಯ ಹೆರಾಲ್ಡ್ ಡಿಸೋಜ, ಶಿಕ್ಷಕ ಪ್ರಭಾಕರ್ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಅಧ್ಯಕ್ಷ ಜನಾರ್ಧನ್ ಭಟ್ ಸ್ವಾಗತಿಸಿ, ವಿಜಯ ಬಾಯಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಜಂತುಹುಳ ನಿವಾರಣಾ ಅಲ್ಬೇಂಡಾಜೋಲ್ ಮಾತ್ರೆಗಳನ್ನು ನೀಡಲಾಯಿತು.








