ಸಿಂಧು, ಪ್ರಣೀತ್, ಸೈನಾಗೆ ಸೋಲು, ಕಶ್ಯಪ್‌ಗೆ ಗೆಲುವು
ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಇಂಚಿಯೊನ್, ಸೆ.25: ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಬುಧವಾರ ಸ್ಟಾರ್ ಶಟ್ಲರ್‌ಗಳಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಹಾಗೂ ಬಿ.ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ನಿರಾಸೆ ಅನುಭವಿಸಿದರು. ಪಾರುಪಲ್ಲಿ ಕಶ್ಯಪ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಜಯ ಸಾಧಿಸಿದ ಭಾರತದ ಏಕೈಕ ಆಟಗಾರ ಎನಿಸಿಕೊಂಡರು.
ಕಶ್ಯಪ್ 42 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಲು ಚಿಯಾ ಹುಂಗ್ ವಿರುದ್ಧ 21-16, 21-16 ನೇರ ಗೇಮ್‌ಗಳಿಂದ ಜಯ ಸಾಧಿಸಿದರು. ವಿಶ್ವ ಚಾಂಪಿಯನ್ ಸಿಂಧು ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಬೆವೆನ್ ಝಾಂಗ್ ಎದುರು 7-21, 24-22, 15-21 ಗೇಮ್‌ಗಳ ಅಂತರದಿಂದ ಸೋಲನುಭವಿಸಿ ಟೂರ್ನಮೆಂಟ್‌ನಿಂದ ಹೊರ ನಡೆದಿದ್ದಾರೆ. ಸಾಯಿ ಪ್ರಣೀತ್ ಹಾಗೂ ಸೈನಾ ಮೊದಲ ಸುತ್ತಿನ ಪಂದ್ಯದಲ್ಲಿ ಗಾಯಗೊಂಡು ನಿವೃತ್ತಿಯಾದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿರುವ ಪ್ರಣೀತ್ ಪಾದದ ಕೀಲು ನೋವು ಕಾಣಿಸಿಕೊಂಡ ಕಾರಣ ಐದನೇ ಶ್ರೇಯಾಂಕದ ಡೆನ್ಮಾರ್ಕ್‌ನ ಆ್ಯಂಡರ್ಸ್ ಅಂಟೊನ್‌ಸೆನ್ ವಿರುದ್ಧ 9-21, 7-11 ಅಂತರದ ಹಿನ್ನೆಡೆಯಲ್ಲಿದ್ದಾಗ ಸ್ಪರ್ಧೆಯಿಂದ ಹಿಂದೆ ಸರಿದರು.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಸೈನಾ ಗಾಯಗೊಂಡು ನಿವೃತ್ತಿಯಾಗುವ ಮೊದಲು ಕೊರಿಯಾದ ಕಿಮ್ ಗಾ ಯುನ್ ವಿರುದ್ಧ 21-19, 18-21 ಹಾಗೂ 1-8 ಹಿನ್ನಡೆಯಲ್ಲಿದ್ದರು. ಸೈನಾ ಕೊರಿಯಾ ಆಟಗಾರ್ತಿ ವಿರುದ್ಧ ಈ ಹಿಂದೆ ಆಡಿದ್ದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ ಹೆಡ್-ಟು-ಹೆಡ್ ದಾಖಲೆಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದ್ದರು.
ಸೈನಾ ಈ ವರ್ಷದ ಆರಂಭದಲ್ಲಿ ಇಂಡೋನೇಶ್ಯ ಓಪನ್ ಪ್ರಶಸ್ತಿ ಜಯಿಸಿದ ಬಳಿಕ ನಿರಂತರವಾಗಿ ಗಾಯದ ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದಾರೆ. ಕಳೆದ ವಾರ ನಡೆದ ಚೀನಾ ಓಪನ್ ಸೂಪರ್-1000 ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದಿದ್ದರು.
ಸಿಂಧು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ತನ್ನ ಮೊದಲಿನ ಲಯ ಕಳೆದುಕೊಂಡಿದ್ದಾರೆ. ಸಿಂಧು ಕಳೆದ ವಾರ ಚೀನಾ ಓಪನ್‌ನಲ್ಲಿ ಎರಡನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಪೊರ್ನ್‌ಪಾವೀ ಚೊಚುವಾಂಗ್ ವಿರುದ್ಧ ಸೋತಿದ್ದರು.
26ರ ಹರೆಯದ ಸಿಂಧು ಬಾಸೆಲ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪುವ ಹಾದಿಯಲ್ಲಿ ಝಾಂಗ್‌ರನ್ನು ಮಣಿಸಿದ್ದರು. ಚೀನಾ ಸಂಜಾತೆ ಅಮೆರಿಕದ ಆಟಗಾರ್ತಿ ಝಾಂಗ್ ಕಳೆದ ವರ್ಷ ಇಂಡಿಯಾ ಓಪನ್ ಹಾಗೂ ಡೆನ್ಮಾರ್ಕ್ ಓಪನ್‌ನಲ್ಲಿ ಸಿಂಧುಗೆ ಸೋಲಿನ ಕಹಿ ಉಣಿಸಿದ್ದರು.







