ಮುಂದಿನ ವರ್ಷ ಭಾರತ-ಕ್ರೊಯೇಶಿಯ ಫುಟ್ಬಾಲ್ ತಂಡಗಳ ಸೌಹಾರ್ದ ಪಂದ್ಯ?
ಹೊಸದಿಲ್ಲಿ, ಸೆ.25: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಹಾಗೂ ಕ್ರೊಯೇಶಿಯ ಫುಟ್ಬಾಲ್ ಒಕ್ಕೂಟಗಳು ಉಭಯ ದೇಶಗಳ ತಂಡಗಳ ಮಧ್ಯೆ ಸೌಹಾರ್ದ ಪಂದ್ಯವನ್ನು ಆಯೋಜಿಸುವ ಕುರಿತು ಚರ್ಚಿಸಿವೆ. ಎಲ್ಲವೂ ಯೋಜನೆಯಂತೆ ನಡೆದರೆ 2020ರ ಮಾರ್ಚ್ 23 ಹಾಗೂ 31ರ ಮಧ್ಯೆ ಸೌಹಾರ್ದ ಪಂದ್ಯ ನಡೆಯಲಿದೆ.
ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಇತ್ತೀಚೆಗೆ ಕ್ರೊಯೇಶಿಯಕ್ಕೆ ತೆರಳಿದ್ದಾಗ ಆ ದೇಶದ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಡಾವೊರ್ ಸುಕೆರ್‌ರನ್ನು ಭೇಟಿಯಾಗಿದ್ದರು. ಕ್ರೊಯೇಶಿಯದ ಮಾಜಿ ಆಟಗಾರ ಹಾಗೂ ಭಾರತದ ಹಾಲಿ ಕೋಚ್ ಇಗೊರ್ ಸ್ಟಿಮಾಕ್ ಕೂಡ ಈ ವೇಳೆ ಉಪಸ್ಥಿತರಿದ್ದರು.
ಭಾರತ ಹಾಗೂ ಫಿಫಾ ವಿಶ್ವಕಪ್‌ನ ರನ್ನರ್ಸ್-ಅಪ್ ಕ್ರೊಯೇಶಿಯದ ನಡುವೆ ಸೌಹಾರ್ದ ಪಂದ್ಯ ನಡೆಯುವ ಸಾಧ್ಯತೆಯಿದೆ. ನವೆಂಬರ್‌ನಲ್ಲಿ ನಡೆಯಲಿರುವ ಮುಂದಿನ ಸಭೆಯಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದು ದಾಸ್ ಆಂಗ್ಲ ದಿನಪತ್ರಿಕೆಯೊಂದಕ್ಕೆ ತಿಳಿಸಿದರು.
1998ರ ಫಿಫಾ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದ ಕ್ರೊಯೇಶಿಯ ತಂಡದಲ್ಲಿ ಸ್ಟಿಮಾಕ್ ಹಾಗೂ ಸುಕೆರ್ ಸಹ ಆಟಗಾರರಾಗಿದ್ದರು. ಹೆಚ್ಚು ಅಂತರ್‌ರಾಷ್ಟ್ರೀಯ ಸೌಹಾರ್ದ ಪಂದ್ಯಗಳನ್ನು ನಡೆಸಬೇಕೆಂದು ಸ್ಟಿಮಾಕ್ ಮನವಿ ಮಾಡಿದ ಬಳಿಕ ಉಭಯ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಭೇಟಿಯಾಗಿದ್ದಾರೆ.
ಭಾರತ ಈ ಹಿಂದೆ ಚೀನಾದ ವಿರುದ್ಧ ಸೌಹಾರ್ದ ಪಂದ್ಯವನ್ನಾಡಿದ್ದು ಈ ಪಂದ್ಯ ಗೋಲುರಹಿತ ಡ್ರಾನಲ್ಲಿ ಕೊನೆಗೊಂಡಿತ್ತು.







