ಸೆ.27ರಿಂದ 'ಉದ್ಯಮ್ ಸಮಾಗಮ್’ ವ್ಯಾಪಾರ ಮೇಳ
ಉಡುಪಿ, ಸೆ.25: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ, ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ಮಂಗಳೂರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಣಿಪಾಲ- ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಉದ್ಯಮ್ ಸಮಾಗಮ್’ ವ್ಯಾಪಾರ ಮೇಳ ಹಾಗೂ ವಸ್ತು ಪ್ರದರ್ಶನವನ್ನು ಸೆ.27 ಮತ್ತು 28ರಂದು ಹಮ್ಮಿಕೊಳ್ಳಲಾಗಿದೆ.
ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾದ ಈ ಮೇಳದಲ್ಲಿ 50 ಮಳಿಗೆ ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಆಹಾರ ತಯಾರಿಕಾ ಕೈಗಾರಿಕೆ, ಕರಕುಶಲ ವಸ್ತುಗಳು ಹಾಗೂ ಕೈಮಗ್ಗದ ಬಟ್ಟೆ, ಜ್ಯೂಟ್ ಬ್ಯಾಗ್‌ಗಳ ಮಳಿಗೆಗಳಿರುತ್ತವೆ. ಈ ವಸ್ತುಪ್ರದರ್ಶನ ಬೆಳಗ್ಗೆಯಿಂದ ರಾತ್ರಿ 8ಗಂಟೆಯವರೆಗೆ ತೆರೆದಿರುತ್ತದೆ ಎಂದು ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆಯ ಉಪನಿರ್ದೇಶಕ ಕೆ.ಸಾಕ್ರಟೀಸ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿರುವರು. ವಸ್ತು ಪ್ರದರ್ಶನವನ್ನು ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಶಾಸಕ ಕೆ.ರಘುಪತಿ ಭಟ್ ವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಎಂಎಸ್‌ಎಂಇ ಸಹಾಯಕ ನಿರ್ದೇಶಕ ಸುಂದರ್ ಶೇರಿಗಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ವಾಮನ ನಾಯಕ್, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಕಾರ್ಯದರ್ಶಿ ಎಂ. ವಲ್ಲಭ್ ಭಟ್, ಉಪಾಧ್ಯಕ್ಷ ಹರೀಶ್ ಕುಂರ್, ವಸಂತ ಕಿಣಿ ಉಪಸ್ಥಿತರಿದ್ದರು.







