ಪೊಲೀಸರ ವ್ಯಾಪಕ ದುರ್ವರ್ತನೆ, ಸ್ವೇಚ್ಛಾಚಾರ ರಾಜ್ಯವನ್ನು ಅರಾಜಕತೆಯ ಅಂಚಿಗೆ ತಳ್ಳುತ್ತಿದೆ: ಎಸ್‌ಡಿಪಿಐ

ಬೆಂಗಳೂರು, ಸೆ.25: ರಾಜ್ಯದಲ್ಲಿ ಇತ್ತೀಚೆಗೆ ವರದಿಯಾಗುತ್ತಿರುವ ಪೊಲೀಸರ ವ್ಯಾಪಕ ದುರ್ವರ್ತನೆ ಹಾಗೂ ಸ್ವೇಚ್ಛಾಚಾರ ರಾಜ್ಯವನ್ನು ಅರಾಜಕತೆಯ ಅಂಚಿಗೆ ತಳ್ಳುತ್ತಿದೆ. ಇದು ನಾಗರಿಕರ ಸ್ವಾತಂತ್ರ, ಸ್ವಾಭಿಮಾನಕ್ಕೆ ಭಾರೀ ಅಪಾಯವನ್ನೊಡ್ಡುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವೆಡೆ ಪೊಲೀಸರು ವಾಹನ ಚಾಲಕರ ಮೇಲೆ ಹಲ್ಲೆ ನಡೆಸುವುದು, ಅಶ್ಲೀಲ ಪದಗಳನ್ನು ಬಳಸುವುದು, ನಿಂದಿಸುವುದು, ಲಂಚ ಪಡೆಯುವುದು, ಬೆದರಿಸುವುದು ಮುಂತಾದವುಗಳು ನಿರಂತರವಾಗಿ ನಡೆಯುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುತ್ತಿವೆ. ಪೊಲೀಸ್ ಠಾಣೆಗಳಲ್ಲಿ ಅಮಾನುಷ ಚಿತ್ರಂಸೆ ನೀಡುವ ಹಾಗೂ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಪ್ರಕರಣಗಳು ನಡೆಯುತ್ತಿವೆ.
ಜನರನ್ನು ವಂಚಿಸುವ ಹಣಕಾಸು ಸಂಸ್ಥೆಯೊಂದರಿಂದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕೆಜಿಗಟ್ಟಲೆ ಚಿನ್ನ ಹಾಗೂ ಪ್ರತೀ ತಿಂಗಳು ಕೋಟ್ಯಾಂತರ ರೂ. ಹಣ ಹಫ್ತಾ ವಸೂಲಿ ಮಾಡಿರುವುದು ಕೂಡಾ ದೊಡ್ಡ ಸುದ್ದಿಯಾಗಿದೆ. ಠಾಣೆಗಳಲ್ಲಿ ದೂರು ದಾಖಲಿಸಲು ಸತಾಯಿಸುತ್ತಿರುವುದು, ರಾತ್ರಿ ಹೊತ್ತು ಮನೆಗಳಿಗೆ ನುಗ್ಗಿ ಅಮಾಯಕರನ್ನು ಎಳೆದುಕೊಂಡು ಹೋಗುವುದು ಇತ್ಯಾದಿ ಪ್ರಕರಣಗಳು ಜನತೆಯನ್ನು ತಲ್ಲಣಗೊಳಿಸಿವೆ. ಈ ಎಲ್ಲ ಘಟನೆಗಳಿಂದ ಕರ್ನಾಟಕ ರಾಜ್ಯವು ಪೊಲೀಸ್ ದುಂಡಾ ವರ್ತನೆಯ ರಾಜ್ಯವನ್ನಾಗಿ ಮಾರ್ಪಡಿಸಿದೆ. ಪೊಲೀಸರು ದಕ್ಷತೆ, ಪ್ರಾಮಾಣಿಕತೆಯೊಂದಿಗೆ ನೈತಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಜನರೊಂದಿಗೆ ಸ್ನೇಹ, ಶ್ವಾಸದೊಂದಿಗೆ ಬೆರೆಯುತ್ತಾ ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಪೊಲೀಸರು ರಚನಾತ್ಮಕ ಪಾತ್ರ ನಿರ್ವಸಬೇಕೆಂದು ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.







