ಕುಂಜತ್ತಬೈಲ್: ನೆರೆ ಸಂತ್ರಸ್ತರಿಗೆ ನೆರವು
ಕುಂಜತ್ತಬೈಲ್, ಸೆ.25: ಸ್ತ್ರೀ ಜಾಗೃತಿ ಸಮಿತಿ ದ.ಕ ಮತ್ತು ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್‌ನ ಜಂಟಿ ಆಶ್ರಯದಲ್ಲಿ ಸ್ತ್ರೀ ಜಾಗೃತಿ ಸಮಿತಿಯ ಸಂಚಾಲಕಿ ಸಂಶಾದ್ ಎ. ನೇತೃತ್ವದಲ್ಲಿ ಬೆಳ್ತಂಗಡಿ ನೆರೆ ಬಾಧಿತ ಪ್ರದೇಶದ ಜನರಿಗೆ ನೀಡಲು ಸಂಗ್ರಹಿಸಿದ ಅಕ್ಕಿ ವಿತರಣಾ ಕಾರ್ಯಕ್ರಮಕ್ಕೆ ಜ್ಯೋತಿನಗರದಲ್ಲಿ ಮಂಗಳವಾರ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತ್‌ಬೈಲ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕಷ್ಣದಲ್ಲಿದ್ದರೂ ಕೂಡ ಇನೊಬ್ಬರ ಕಷ್ಟದಲ್ಲಿ ತನ್ನಿಂದಾದ ರೀತಿಯಲ್ಲಿ ಸಹಾಯ ಮಾಡುವ ಸ್ತ್ರೀ ಜಾಗೃತಿ ಸಮಿತಿ ಹಾಗೂ ಗೃಹ ಕಾರ್ಮಿಕರ ಕಾರ್ಯ ಶ್ಲಾಘ್ನನೀಯ ಎಂದು ಹೇಳಿದರು.
ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಲತಾ ಆರ್. ಕೋಟ್ಯಾನ್ ಅತಿಥಿಯಾಗಿ ಭಾಗವಹಿಸಿ ಇದೊಂದು ಪುಣ್ಯಕಾರ್ಯವಾಗಿದೆ. ಮಹಿಳೆಯರು ಪರಸ್ಪರ ಸಂಘಟಿತರಾಗಿ ಸಂಗ್ರಹಿಸಿ ನೆರೆ ಹಾವಳಿಯಿಂದ ತೊಂದರೆಗೊಳಗಾದ ಜನರಿಗೆ ನೀಡುತ್ತಿರುವುದು ಎಲ್ಲಾ ಮಹಿಳೆರಿಗೆ ಸ್ತ್ರೀ ಜಾಗೃತಿ ಸಮಿತಿ ಮಾದರಿಯಾಗಿದೆ ಎಂದರು.
ಬೆಳ್ತಂಗಡಿಯ ಕಿಲ್ಲೂರು ಕೊಲ್ಲಿ ದಿಡುಪ್ಪೆಪ್ರದೇಶ ಜನರಿಗೆ ಅಕ್ಕಿಯನ್ನು ವಿತರಿಸಲಾಯಿತು. ಕುಂಜತ್ತಬೈಲ್ ನಂದಿನಿ ಮಹಿಳಾ ಮಂಡಳಿಯ ಕಾರ್ಯದರ್ಶಿ ಬಿ.ರತ್ನಮ್ಮ, ಕಾವೂರು ಠಾಣೆಯ ಮೋಹನ್ ಕುಮಾರ್ ಜಿ.ಜೆ, ಕುಂಜತ್ತಬೈಲ್ ಅಂಗನವಾಡಿ ಕಾರ್ಯಕರ್ತೆ ಶ್ಯಾಮಲತಾ, ಸಮಾಜ ಸೇವಕ ಹೊನ್ನಯ್ಯ ಅತ್ರಬೈಲ್, ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್‌ನ ಸದಸ್ಯರಾದ ಸೀತಾ, ರೇಣುಕಾ, ಸರಸ್ವತಿ, ಗಂಗಮ್ಮ, ಜ್ಯೋತಿ, ಅಂಬಿಕಾ, ಉದ್ಯಮಿಗಳಾದ ಹರ್ಷಿದ್, ಶೇಖ್ ಇಮ್ರಾನ್, ತನ್ಸೀರ್ ಉಪಸ್ಥಿತರಿದ್ದರು.







