ಹೊಸಕೋಟೆಯಲ್ಲಿ ನನ್ನ ಮಗ ಶರತ್ ಬಚ್ಚೇಗೌಡಗೆ ಟಿಕೆಟ್ ನೀಡಬೇಕು: ಸಂಸದ ಬಿ.ಎನ್.ಬಚ್ಚೇಗೌಡ

ಬೆಂಗಳೂರು, ಸೆ.25: ಅನರ್ಹ ಶಾಸಕ ಎಂಟಿಬಿ ನಾಗರಾಜ್‌ರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏನಾದರೂ ಮಾಡಲಿ. ಆದರೆ, ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್ ನನ್ನ ಮಗ ಶರತ್ ಬಚ್ಚೇಗೌಡಗೆ ಕೊಡಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ಒತ್ತಾಯಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರಿಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವುದು ಸರಿಯಲ್ಲ. ನಾಗರಾಜ್‌ಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಅನ್ಯ ಮಾರ್ಗಗಳು ಇವೆ ಎಂದರು.
ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ಅಥವಾ ವಿಧಾನಪರಿಷತ್ತಿನ ಸದಸ್ಯತ್ವ ಬೇಕಾದರೆ ನಾಗರಾಜ್‌ಗೆ ಕೊಡಲಿ. 2018ರ ಚುನಾವಣೆಯಲ್ಲಿ ನೀಡಿದಂತೆ ಈ ಉಪ ಚುನಾವಣೆಯಲ್ಲೂ ಶರತ್ ಬಚ್ಚೇಗೌಡಗೆ ಟಿಕೆಟ್ ಕೊಡಬೇಕು ಎಂಬುದು ಕಾರ್ಯಕರ್ತರ ಆಗ್ರಹವಾಗಿದೆ ಎಂದು ಬಚ್ಚೇಗೌಡ ಹೇಳಿದರು.
ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿ ಅಥವಾ ತಮ್ಮ ಮಗನನ್ನು ಬೇಕಾದರೆ ನಿಲ್ಲಿಸಲಿ. ಎಂಟಿಬಿ ನಾಗರಾಜ್‌ಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದರು.







