ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರ: 610 ಶಾಲಾ ಸಂಯೋಜಕರ ಹುದ್ದೆ ಭರ್ತಿ ಮಾಡಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಸೆ.25: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದಷ್ಟು ಬೇಗ ಕ್ರಿಯಾ ಯೋಜನೆ ರೂಪಿಸಲು ಹಾಗೂ ಖಾಲಿ ಇರುವ 610 ಶಾಲಾ ಸಂಯೋಜಕರ(ಹಾಜರಾತಿ ಪ್ರಾಧಿಕಾರದ ಕೆಲಸ ನಿರ್ವಹಿಸುವವರು) ಹುದ್ದೆಗಳನ್ನು ಭರ್ತಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಈ ಕುರಿತು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ನ್ಯಾಯಪೀಠವು ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಗದಗ ಜಿಲ್ಲೆಗಳಲ್ಲಿ ಬರಗಾಲದ ಪರಿಸ್ಥಿತಿ ಹಿನ್ನೆಲೆಯಲ್ಲಿ ಪೋಷಕರು ಉದ್ಯೋಗ ಹುಡುಕಿಕೊಂಡು ಬೇರೆ ಕಡೆಗೆ ಗುಳೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಇಂತಹ ಸಮಸ್ಯೆಯನ್ನು ತಡೆಗಟ್ಟಲು ಆದಷ್ಟು ಬೇಗ ಕ್ರಿಯಾ ಯೋಜನೆ ರೂಪಿಸಬೇಕು. ಶಾಲಾ ಸಂಯೋಜಕರ ಹುದ್ದೆಗಳನ್ನು ಭರ್ತಿ ಮಾಡಲು ನಿರ್ದೇಶಿಸಿತು. ಅಲ್ಲದೆ, ಈ ಕುರಿತ ಮಾಹಿತಿಯನ್ನು ನೀಡಲು ರಾಜ್ಯ ಸರಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.