ಮಂಜೇಶ್ವರ ವಿಧಾನಸಭಾ ಉಪಚುನಾವಣೆ: ಎಲ್.ಡಿ.ಎಫ್ ಅಭ್ಯರ್ಥಿಯಾಗಿ ಶಂಕರ ರೈ ಕಣಕ್ಕೆ
ಕಾಸರಗೋಡು, ಸೆ.26: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎಲ್.ಡಿ.ಎಫ್ ಅಭ್ಯರ್ಥಿಯಾಗಿ ಶಂಕರ ರೈ ಮಾಸ್ಟರ್ ರನ್ನು ಕಣಕ್ಕಿಳಿಸಲಾಗಿದೆ.
ಅಂತಿಮ ಕ್ಷಣದ ತನಕ ಮಾಜಿ ಶಾಸಕ ಸಿ.ಎಚ್ ಕುಞಂಬು ರವರ ಹೆಸರು ಪಟ್ಟಿಯಲ್ಲಿದ್ದರೂ ಅನಿರೀಕ್ಷಿತವಾಗಿ ಶಂಕರ ರೈ ರವರನ್ನು ಕಣಕ್ಕಿಳಿಸಲು ಪಕ್ಷವು ತೀರ್ಮಾನ ತೆಗೆದುಕೊಂಡಿತು. ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಇಂದು ಬೆಳಗ್ಗೆ ಅಭ್ಯರ್ಥಿ ಘೋಷಣೆ ಮಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಶಂಕರ ರೈ, ಪ್ರಸ್ತುತ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾಗಿದ್ದಾರೆ. ಕೇರಳ ತುಳು ಅಕಾಡಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಶಂಕರ ರೈ ರವರು, ಯಕ್ಷಗಾನ ಕಲಾವಿದರಾಗಿದ್ದಾರೆ.
ಪುತ್ತಿಗೆ ಅಂಗಡಿಮೊಗರು ನಿವಾಸಿಯಾಗಿರುವ ಶಂಕರ ರೈ ಮಾಸ್ಟರ್, ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ ಸ್ಥಳೀಯ ಮುಖಂಡರನ್ನು ಕಣಕ್ಕಿಳಿಸುವ ಪಕ್ಷದ ನಿರ್ಧಾರದ ಹಿನ್ನೆಲೆಯಲ್ಲಿ ಶಂಕರ ರೈ ರವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ .
ಅಂತಿಮ ಪಟ್ಟಿಯಲ್ಲಿ ಸಿ.ಎಚ್ ಕುಞಂಬು, ಸಿಪಿಎ ಜಿಲ್ಲಾ ಸಮಿತಿ ಸದಸ್ಯರಾದ ಕೆ.ಆರ್ ಜಯಾನಂದ ಹಾಗೂ ಶಂಕರ ರೈ ರವರ ಹೆಸರಿತ್ತು. ಸಿ.ಎಚ್ ಕುಞಂಬು ರವರನ್ನು ಕಣಕ್ಕಿಸುವ ನಿಟ್ಟಿನಲ್ಲಿ ಸಿಪಿಎಂ ಜಿಲ್ಲಾ ಸಮಿತಿ ನಿನ್ನೆ ತೀರ್ಮಾನಕ್ಕೆ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಅನಿರೀಕ್ಷಿತ ಬದಲಾವಣೆ ಯಿಂದ ಶಂಕರ ರೈ ರವರನ್ನು ಕಣಕ್ಕಿಳಿಸಲಾಗಿದೆ.