ಎರಡು ದಿನಗಳ ಸುನ್ನಿ ದಾವತೆ ಇಸ್ಲಾಮಿ ಇಜ್ತಿಮಾ: ಮೌಲಾನ ಅಝ್ಮತ್ ಉಲ್ಲಾ ಖಾನ್

ಬೆಂಗಳೂರು, ಸೆ.26: ಸುನ್ನಿ ದಾವತೆ ಇಸ್ಲಾಮಿ ಬೆಂಗಳೂರು ಸಮಿತಿಯ ವತಿಯಿಂದ ಅಕ್ಟೋಬರ್ 5 ಹಾಗೂ 6ರಂದು ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ 8ನೇ ವಾರ್ಷಿಕ ಸುನ್ನಿ ಇಜ್ತಿಮಾ ಆಯೋಜಿಸಲಾಗಿದೆ ಎಂದು ಸಮಿತಿಯ ಉಸ್ತುವಾರಿ ಮೌಲಾನ ಮುಹಮ್ಮದ್ ಅಝ್ಮತ್ ಉಲ್ಲಾ ಖಾನ್ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 5ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8ರವರೆಗೆ ಮಹಿಳೆಯರಿಗಾಗಿ ಹಾಗೂ 6ರಂದು ಬೆಳಗ್ಗೆ 11 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಪುರುಷರಿಗಾಗಿ ಇಜ್ತಿಮಾ ನಡೆಯಲಿದೆ ಎಂದರು.
ಉತ್ತರಪ್ರದೇಶದ ಮುಬಾಕರ್‌ಪುರ್‌ನ ಅಲ್ ಜಾಮಿಯಾ ಅಲ್ ಅಶ್ರಫಿಯಾದ ಅಧ್ಯಕ್ಷ ವೌಲಾನ ಮುಫ್ತಿ ಮುಹಮ್ಮದ್ ನಿಝಾಮುದ್ದೀನ್, ಮುಂಬೈನ ಸುನ್ನಿ ದಾವತೆ ಇಸ್ಲಾಮಿಯ ಅಮೀರ್ ಮೌಲಾನ ಮುಹಮ್ಮದ್ ಶಾಕಿರ್ ಅಲಿ ನೂರಿ, ನಾಯಬೆ ಅಮೀರ್ ಮುಹಮ್ಮದ್ ರಿಝ್ವಾನ್ ಖಾನ್, ಮಾಲೇಗಾಂವ್‌ನ ಸುನ್ನಿ ದಾವತೆ ಇಸ್ಲಾಮಿಯ ಉಸ್ತುವಾರಿ ಸಯ್ಯದ್ ಅಮೀನುಲ್ ಖಾದ್ರಿ ಈ ಇಜ್ತಿಮಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
1991ರಲ್ಲಿ ಸುನ್ನಿ ದಾವತೆ ಇಸ್ಲಾಮಿ ಸಮಿತಿಯು ಮುಂಬೈನಲ್ಲಿ ಆರಂಭವಾಯಿತು. ಇವತ್ತು 55 ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಸಮುದಾಯದಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣದ ಕಡೆಯು ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಅಝ್ಮತ್ ಉಲ್ಲಾ ಖಾನ್ ತಿಳಿಸಿದರು.
ಇವತ್ತಿನ ವಾಸ್ತವ ಪರಿಸ್ಥಿತಿಯಲ್ಲಿ ಸಮಾಜ ಎದುರಿಸುತ್ತಿರುವ ಸವಾಲುಗಳು, ಅದಕ್ಕೆ ಪರಿಹಾರ ಕಂಡುಕೊಳ್ಳಲು ನಮ್ಮ ಜೀವನದಲ್ಲಿ ತರಬೇಕಿರುವ ಬದಲಾವಣೆಗಳು, ಪ್ರವಾದಿ ಮುಹಮ್ಮದ್(ಸ), ಸಹಾಬಿಗಳ ಜೀವನ ಆದರ್ಶಗಳ ಕುರಿತು ಇಜ್ತಿಮಾದಲ್ಲಿ ಪ್ರಮುಖ ಧಾರ್ಮಿಕ ಮುಖಂಡರು ಪ್ರವಚನ ನೀಡಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಸ್ಜಿದೆ ಗರೀಬ್ ನವಾಝ್ ಅಧ್ಯಕ್ಷ ಸಯ್ಯದ್ ಅಕ್ಬರ್ ರಝ್ವಿ, ಮೌಲಾನ ಸಲೀಮ್ ಅಶ್ರಫಿ, ಹಾಫಿಝ್ ಹಬೀಬ್ ರಝ್ವಿ, ಉಮರ್ ಶರೀಫ್ ಉಪಸ್ಥಿತರಿದ್ದರು.







