ಸೆ.28ರಂದು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ: ಸುರೇಶ್ ಮರಕಾಲಗೆ ಹುಟ್ಟೂರ ಸನ್ಮಾನ
ಉಡುಪಿ, ಸೆ.26: ಶೈಕ್ಷಣಿಕ ಕ್ಷೇತ್ರದ ಅತ್ಯಮೂಲ್ಯ ಸೇವೆಗಾಗಿ 2019ನೆ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿರಿಯಾರ ಗ್ರಾಮದ ಜಂಬೂರಿನ ಸುರೇಶ್ ಮರಕಾಲ ಅವರಿಗೆ ಹೂಟ್ಟೂರ ಸನ್ಮಾನ ಸಮಾರಂಭವನ್ನು ಸೆ.28 ರಂದು ಅಪರಾಹ್ನ 2:30ಕ್ಕೆ ಸಾಬರಕಟ್ಟೆ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಸಾಬರಕಟ್ಟೆ ಹುಟ್ಟೂರ ಸನ್ಮಾನ ಸಮಿತಿ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮೊದಲಾದವರು ಭಾಗವಹಿಸ ಲಿರುವರು ಎಂದು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಂ. ರವೀಂದ್ರನಾಥ ಕಿಣಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಒಟ್ಟು ಎಂಟು ವರ್ಷಗಳ ಕಾಲ ಕರ್ತವ್ಯ ನಿರ್ವ ಹಿಸಿದ್ದ ಸುರೇಶ್ ಮರಕಾಲ, ಶಿಕ್ಷಕನಾಗಬೇಕೆಂಬ ಗುರಿಯೊಂದಿಗೆ ಧಾರವಾಡ ಕರ್ನಾಟಕ ವಿವಿಯಲ್ಲಿ ನಾಲ್ಕು ಚಿನ್ನದ ಪಕಗಳೊಂದಿಗೆ ಬಿಎಡ್ ವಿದ್ಯಾಭ್ಯಾಸ ವನ್ನು ಪ್ರಥಮ ರ್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದರು. ಇವರು ಶಿಕ್ಷಕರಾಗಿ ಮಕ್ಕಳಿಗೆ ಕಲಿಕೆ ಜೊತೆ ಶಾಡೋಪ್ಲೇ, ಕನ್ನಡಿ ಬರಹ, ಪಿಯಾನೋ, ಕೀ ಬೋರ್ಡ್ ತರಬೇತಿ, ನಾಟಕಾಭಿನಯ, ಥರ್ಮೋಫೋಮ್ ಪೈಂಟಿಂಗ್, ಸಂಗೀತವನ್ನು ಕಲಿಸುತ್ತಿದ್ದಾರೆ. ಸಾಹಿತಿಯಾಗಿರುವ ಇವರು ಅನೇಕ ಕಥೆ, ಕವನ, ನಾಟಕಗಳನ್ನು ರಚಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಸಾದ್ ಭಟ್ ಕಾಜ್ರಳ್ಳಿ, ಪ್ರಕಾಶ್ ಪೂಜಾರಿ ಯಡ್ತಾಡಿ, ಹರೀಶ್ ಶೆಟ್ಟಿ ಸಾಬರಕಟ್ಟೆ, ಆನಂದ ಸಾಬರಕಟ್ಟೆ, ರವಿರಾಜ, ಗಣೆೀಶ್ ಸಾಬರಕಟ್ಟೆ ಉಪಸ್ಥಿತರಿದ್ದರು.







