ಐದನೆ ದಿನಕ್ಕೆ ಕಾಲಿರಿಸಿದ ಮರಳಿಗಾಗಿ ಕಟ್ಟಡ ಕಾರ್ಮಿಕರ ಧರಣಿ

ಉಡುಪಿ, ಸೆ.26: ಮರಳುಗಾರಿಕೆಯನ್ನು ಕೂಡಲೇ ಆರಂಭಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹ ನಾಲ್ಕನೆ ದಿನವಾದ ಗುರುವಾರವೂ ಮುಂದುವರಿದಿದೆ.
ಧರಣಿಯನ್ನುದ್ಧೇಶಿಸಿ ಮಾತನಾಡಿದ ಸಮಿತಿಯ ಸಂಚಾಲಕ ಶೇಖರ ಬಂಗೇರ, ಎನ್‌ಐಟಿಕೆಯ ಸರ್ವೆ ಪ್ರಕಾರ 8ಲಕ್ಷ ಮೆಟ್ರಿಕ್ ಟನ್ ಮರಳು ತೆಗೆಯಬಹುದಾಗಿದ್ದು, ಜಿಲ್ಲಾಡಳಿತ 5ಲಕ್ಷ ಮೆಟ್ರಿಕ್ ಟನ್ ಕೊಡಬಹುದು ಎಂದು ಹೇಳಿದೆ. ಆದರೆ ಈಗ 3ಲಕ್ಷ ಮೆಟ್ರಿಕ್ ಟನ್ ಮಾತ್ರ ಕೊಡುತ್ತಿರುವುದು ಸರಿಯಲ್ಲ. ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಮರುಪರಿಶೀಲನೆ ನಡೆಸಿ ಹಿಂದಿನ ನಿರ್ಧಾರದಂತೆ 5ಲಕ್ಷ ಮೆಟ್ರಿಕ್ ಟನ್ ಕೊಡಬೇಕೆಂದು ಒತ್ತಾಯಿಸಿದರು.
ದಸಂಸ ಬೆಂಬಲ: ಕಟ್ಟಡ ಕಾರ್ಮಿಕರ ಈ ಧರಣಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಘಟಕವು ಬೆಂಬಲ ವ್ಯಕ್ತಪಡಿಸಿದೆ.
ಧರಣಿಯಲ್ಲಿ ಪಾಲ್ಗೊಂಡ ದಲಿತ ಮುಖಂಡ ಜಯನ್ ಮಲ್ಪೆ ಮಾತನಾಡಿ, ಕೇಂದ್ರ ಸರಕಾರ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಿದರೆ, ಅದೇ ಬಿಜೆಪಿಯ ರಾಜ್ಯ ಸರಕಾರ ಕಾರ್ಮಿಕರ ದುಡಿಮೆಗೆ ಬೇಕಾದ ಮರಳು ಕೊಡಲು ವಿಳಂಬ ಮಾಡುತ್ತಿದೆ. ಕೇವಲ ಕಟ್ಟಡ ಕಾರ್ಮಿಕರಿಗೆ ಮಾತ್ರವಲ್ಲದೆ ಇಡೀ ಜಿಲ್ಲೆಯ ಅಭಿವೃದ್ಧಿಗಾಗಿ ನಡೆಸಲಾಗುತ್ತಿರುವ ಈ ಧರಣಿಗೆ ದಸಂಸ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು.
ಧರಣಿಯಲ್ಲಿ ಸಮಿತಿ ಸಂಚಾಲಕ ಸುರೇಶ್ ಕಲ್ಲಾಗರ್, ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ದಾಸ ಭಂಡಾರಿ, ರಾಜೀವ ಪಡುಕೋಣೆ, ವಿಠ್ಠಲ ಪೂಜಾರಿ, ಚಿಕ್ಕ ಮೊಗವೀರ, ಅರುಣ್ ಕುಮಾರ್, ಕವಿರಾಜ್, ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.







