ಬೆಳಗಾವಿಯಲ್ಲೇ 25 ದಿನಗಳ ಅಧಿವೇಶನ ನಡೆಸಿ: ಸಿಎಂ ಯಡಿಯೂರಪ್ಪಗೆ ಪತ್ರ ಬರೆದ ಸಿದ್ದರಾಮಯ್ಯ
"ಸಂಪ್ರದಾಯ ಮುರಿಯುವುದು ಸಮಂಜಸವಲ್ಲ"

ಫೈಲ್ ಚಿತ್ರ
ಬೆಂಗಳೂರು, ಸೆ.26: ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿಯೇ ಬೆಳಗಾವಿಯಲ್ಲಿ ಪ್ರತಿವರ್ಷ ಅಧಿವೇಶನ ನಡೆಸುವ ಸಂಪ್ರದಾಯ ಅನುಸರಿಸಲಾಗುತ್ತಿದೆ. ಇದಕ್ಕಾಗಿಯೇ ಅಲ್ಲಿ ಸುವರ್ಣ ವಿಧಾನಸೌಧವನ್ನೂ ನಿರ್ಮಿಸಲಾಗಿದೆ. ಆ ಸಂಪ್ರದಾಯವನ್ನು ಮುರಿಯುವುದು ಸಮಂಜಸವಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಉಪ ಚುನಾವಣೆ ಬಳಿಕ ಅಕ್ಟೋಬರ್ 22ರಿಂದ ಬೆಳಗಾವಿಯಲ್ಲೆ ಅಧಿವೇಶನ ನಡೆಸುವುದು ಸೂಕ್ತ. ಇದರಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿ ಕುರಿತು ಸುದೀರ್ಘವಾಗಿ ಚರ್ಚಿಸಲು ಸಾಧ್ಯವಾಗುತ್ತದೆ. ಹೀಗಾಗಿ ಬೆಳಗಾವಿಯಲ್ಲಿ ಅ.22 ರಿಂದ 15 ರಿಂದ 25 ದಿನಗಳ ಕಾಲ ಅಧಿವೇಶನ ನಡೆಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ವಿಧಾನಮಂಡಲ ಅಧಿವೇಶನವನ್ನು ಬೆಂಗಳೂರು ಬದಲಿಗೆ ಬೆಳಗಾವಿಯಲ್ಲಿ ನಡೆಸುವುದು ಸಮಂಜಸ. ಇದರಿಂದ ಪರಿಹಾರ ಕಾರ್ಯ ಚುರುಕಾಗುವುದರ ಜೊತೆಗೆ ಸಂತ್ರಸ್ತರಲ್ಲೂ ಆಶಾ ಭಾವನೆ ಮೂಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಅತಿವೃಷ್ಟಿಯಿಂದಾಗಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಲಕ್ಷಾಂತರ ಮಂದಿ ಮನೆ, ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೊಲ, ಗದ್ದೆ, ತೋಟಗಳಿಗೆ ನೀರು ನುಗ್ಗಿ ಕೃಷಿಕರಿಗೂ ಸಂಕಷ್ಟದ ಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರವಾಹದ ಭೀಕರತೆ ಉತ್ತರ ಕರ್ನಾಟಕದ ಭಾಗದಲ್ಲಿ ತೀವ್ರವಾಗಿದ್ದು, ಅದರಲ್ಲಿಯೂ ಬೆಳಗಾವಿ-ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಭಾರಿ ಹಾನಿಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇತ್ತೀಚೆಗೆ ಪ್ರವಾಸ ಕೈಗೊಂಡಾಗ ಜನರ ಕಷ್ಟವನ್ನು ಕಣ್ಣಾರೆ ನೋಡಿದ್ದೇನೆ. ಇದಲ್ಲದೆ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬರದಿಂದ ಜನರು ತತ್ತರಿಸಿದ್ದು, ಕುಡಿಯುವ ನೀರು, ಉದ್ಯೋಗವಿಲ್ಲದೆ ಮತ್ತು ಜಾನುವಾರುಗಳಿಗೆ ಮೇವು ಸಿಗದೆ ತೀವ್ರತರ ತೊಂದರೆಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಆದುದರಿಂದ, ಅಕ್ಟೋಬರ್ 10 ರಿಂದ 12ರವರೆಗೆ ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನ ನಡೆಸುವ ಬದಲು, ಅಕ್ಟೋಬರ್ 22 ರಿಂದ (15 ರಿಂದ 25 ದಿನಗಳ ಕಾಲ) ಅಧಿವೇಶನ ನಡೆಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.








