ಕನ್ನಂಗಾರ್ ಮಸೀದಿಯಿಂದ ಹಣ ದುರುಪಯೋಗ ನಡೆದಿಲ್ಲ: ಸ್ಪಷ್ಟನೆ
ಉಡುಪಿ, ಸೆ.26: ಕನ್ನಂಗಾರ್ ಜುಮಾ ಮಸೀದಿಯ ಆಡಳಿತ ಕಮಿಟಿ ಯಾವುದೇ ರೀತಿಯಲ್ಲಿಯೂ ವಕ್ಫ್ ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿಲ್ಲ ಮತ್ತು ಜಮಾಅತ್‌ನಿಂದ ಯಾವುದೇ ರೀತಿಯ ದಂಡ ವಸೂಲಿ ಮಾಡುತ್ತಿಲ್ಲ ಎಂದು ಮಸೀದಿಯ ಅಧ್ಯಕ್ಷ ಎಚ್.ಬಿ.ಮುಹಮ್ಮದ್ ಸ್ಪಷ್ಟನೆ ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯ ಭವನಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 50ಲಕ್ಷ ರೂ. ಅನುದಾನ ದೊರೆತಿದ್ದು, ಬಾಕಿ ಉಳಿದಿರುವ ಹಣವನ್ನು ಗ್ರಾಮಸ್ಥರಿಂದ ಸಾಲ ಹಾಗೂ ದಾನದ ರೂಪದಲ್ಲಿ ಪಡೆದು ಕಾಮಗಾರಿ ಯನ್ನು ಪೂರ್ಣ ಗೊಳಿಸಲಾಗಿದೆ. ಸಮುದಾಯ ಭವನಕ್ಕೆ ಉದ್ಘಾಟನೆಯ ದಿನದಂದೇ ಹೈಬಾ ಅಡಿಟೋರಿಯಂ ಎಂಬುದಾಗಿ ನಾಮಕರಣ ಮಾಡಲಾಗಿತ್ತು ಎಂದರು.
ಮಸೀದಿಯಲ್ಲಿ ಯಾತ್ರಿ ನಿವಾಸ ನಿರ್ಮಿಸಲು ನಮಗೆ ಯಾವುದೇ ಅನುದಾನ ಬಂದಿಲ್ಲ. ಮಸೀದಿ ಮುಂಭಾಗದಲ್ಲಿರುವ ದರ್ಗಾ ಕಟ್ಟಡ ಅಭಿವೃದ್ಧಿ ಪಡಿಸಲು 20 ಲಕ್ಷ ರೂ. ಬಿಡುಗಡೆಗೊಂಡಿದೆ. ಈ ಕಾಮಗಾರಿ ಪೂರ್ಣಗೊಳಿಸಿ ಲೋಕೋಪಯೋಗಿ ಇಲಾಖೆಯ ವರದಿಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ 5 ಲಕ್ಷ ರೂ. ಬಿಡುಗಡೆ ಮಾಡಿದೆ. ಉಳಿದ ಹಣವನ್ನು ಕೆಲವರ ತಪ್ಪು ಮಾಹಿತಿಯಿಂದಾಗಿ ತಡೆ ಹಿಡಿಯಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್, ಪಿ.ಎಂ. ಬಾವಾ, ಅಬ್ದುಲ್ ಹಮೀದ್, ಬಿ.ಕೆ.ಮುಹಮ್ಮದ್, ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು.







