ಉಡುಪಿ: ಸೆ.27ರಂದು ಸಚಿವ ಶ್ರೀರಾಮುಲು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ
ಉಡುಪಿ, ಸೆ.26: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರು ಸೆ.27 ಮತ್ತು 28ರಂದು ಎರಡು ದಿನಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಸೆ.27ರ ಸಂಜೆ 6ಕ್ಕೆ ಮಡಿಕೇರಿಯಿಂದ ಉಡುಪಿಗೆ ಆಗಮಿಸುವ ಸಚಿವರು ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳ ಪರಿಶೀಲನೆ ನಡೆಸಿ, ನಂತರ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ವಾಸ್ತವ್ಯ ಮಾಡುವರು.
28ರಂದು ಬೆಳಗ್ಗೆ 9 ಕ್ಕೆ ಉಡುಪಿ ಪ್ರಸಾದ್ ನೇತ್ರಾಲಯದಲ್ಲಿ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಸಹಯೋಗದೊಂದಿಗೆ ಪ್ರಸಾದ್ ನೇತ್ರಾಲಯದಲ್ಲಿ ನಡೆಯುವ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
11 ಕ್ಕೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಶ್ರೀಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಿಭಾಗದ ನೂತನ ಕಟ್ಟಡವನ್ನು ಉದ್ಘಾಟಿಸುವರು. ಬಳಿಕ ಉಡುಪಿಯ ಶ್ಯಾಮಿಲಿ ಸಭಾಭವನದಲ್ಲಿ ಅಂಬಲಪಾಡಿಯ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಹಾಗೂ ಮಣಿಪಾಲದ ಮಾಹೆ ವತಿಯಿಂದ ನಡೆಯುವ ಆರೋಗ್ಯ ಸುರಕ್ಷಾ ಕಾರ್ಡ್‌ಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಅಪರಾಹ್ನ 2:30ಕ್ಕೆ ಉಡುಪಿ ಕೃಷ್ಣ ಮಠ ಭೇಟಿ ನೀಡಿದ ನಂತರ 3:30ಕ್ಕೆ ಮಂಗಳೂರಿಗೆ ತೆರಳುವರು.







