ಗ್ರೇಟರ್ ಬೆಂಗಳೂರು ಕಾಯ್ದೆ ಜಾರಿಗೆ ಸಿಎಂಗೆ ಮನವಿ

ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು, ಸೆ.26: ಅತ್ಯಂತ ಹಳೆಯದಾದ ಕಾಯ್ದೆಯಲ್ಲಿ ಅತ್ಯಾಧುನಿಕ ಬೆಂಗಳೂರನ್ನು ಮುನ್ನಡೆಸಲು ಸಾಕಷ್ಟು ಸಮಸ್ಯೆಗಳಿವೆ. ಹೀಗಾಗಿ, ಬಿ.ಎಸ್.ಪಾಟೀಲ್ ನೇತೃತ್ವದ ಬಿಬಿಎಂಪಿ ಪುನಾರಚನಾ ಸಮಿತಿ ರೂಪಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೊಳಿಸಿ ಎಂದು ಸಂಸದ ತೇಜಸ್ವಿ ಸೂರ್ಯ ಸಿಎಂಗೆ ಮನವಿ ಮಾಡಿ, ಪತ್ರ ಬರೆದಿದ್ದಾರೆ.
ಕೋಟ್ಯಂತರ ಜನಸಂಖ್ಯೆಯಿರುವ ಬೆಂಗಳೂರಿನಲ್ಲಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿ, ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ರಾಜ್ಯದ ಶೇ.80 ಜಿಡಿಪಿ ಪಾಲು ಬೆಂಗಳೂರು ಹೊಂದಿದ್ದು, ಬಹುತೇಕ ಐಟಿ ಮತ್ತು ಐಟಿ ಆಧರಿತ ಸೇವೆಗಳು (ಐಟಿಇಎಸ್) ಪಾರ್ಕ್ಗಳಲ್ಲಿವೆ. ದೇಶದ ಶೇ.60ಕ್ಕೂ ಹೆಚ್ಚು ಐಟಿ-ಬಿಟಿ ಕಂಪನಿಗಳ ಮುಖ್ಯ ಕಚೇರಿ ಬೆಂಗಳೂರಿನಲ್ಲಿವೆ. ಇಂತಹ ನಗರದ ಚಲನಶೀಲ ಬೆಂಗಳೂರಿಗೆ ಸೂಕ್ತ ಕಾಯ್ದೆಯ ಬೆಂಬಲ ಅಗತ್ಯವಿದೆ ಎಂದಿದ್ದಾರೆ.
ಇಂದೇ ಪರಿಹಾರ ಬೇಕು: 1976ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ (ಕೆಎಂಸಿ) ಅತ್ಯಂತ ಹಳೆಯದಾಗಿದೆ. ಇಂದಿನ ಸಮಸ್ಯೆಗೆ ಪರಿಹಾರ ಸೂಚಿಸುವ ಬದಲಿಗೆ, ನಿನ್ನೆಯ ಸಮಸ್ಯೆಗಳಿಗೆ ನಾಳೆ ಪರಿಹಾರ ಸೂಚಿಸುತ್ತಿದೆ. ನಾಳಿನ ಸಮಸ್ಯೆಗಳಿಗೆ ಇಂದೇ ಪರಿಹಾರ ಸೂಚಿಸುವಂತಾಗಬೇಕಿದೆ. ಅಂತಹ ಕಾಯ್ದೆ ಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.





