ಪುಟ್‌ಬೋರ್ಡ್, ಏಣಿಯಲ್ಲಿ ಪ್ರಯಾಣ: ಖಾಸಗಿ ಬಸ್‌ಗೆ 13,500ರೂ. ದಂಡ

ಉಡುಪಿ, ಸೆ. 26: ಪುಟ್‌ಬೋರ್ಡ್ ಮತ್ತು ಹಿಂಭಾಗ ಹಾಗೂ ಮೇಲ್ಬಾಗ ಗಳಲ್ಲಿ ಹೆಚ್ಚಿನ ಜನರನ್ನು ತುಂಬಿಕೊಂಡು ಹೋಗುವ ಮೂಲಕ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಖಾಸಗಿ ವೇಗದೂತ ಬಸ್ ವಿರುದ್ಧ ಪೊಲೀಸರು ಸಲ್ಲಿಸಿರುವ ವರದಿಯಂತೆ ಉಡುಪಿ ನ್ಯಾಯಾಲಯವು ಸೆ.25ರಂದು 13,500 ರೂ. ದಂಡ ವಿಧಿಸಿದೆ.
ಸೆ.21ರಂದು ರಾತ್ರಿ 9:30ಕ್ಕೆ ಉಡುಪಿ- ಮಂಗಳೂರು ಮಾರ್ಗವಾಗಿ ಸಂಚರಿಸುವ ಕೆಎ20 ಬಿ6657ನೆ ಎಕೆಎಂಎಸ್ ಖಾಸಗಿ ಬಸ್ಸಿನ ಫುಟ್ ಬೋರ್ಡ್, ಹಿಂಭಾಗದ ಏಣಿಯಲ್ಲಿ ಮತ್ತು ಮೇಲ್ಬಾಗದಲ್ಲಿ ಜನ ನೇತಾಡಿಕೊಂಡು ಪ್ರಯಾಣಿಸುತ್ತಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಕುರಿತು ನಿಯಮ ಉಲ್ಲಂಘಿಸಿ ಹೆಚ್ಚಿನ ಜನರನ್ನು ಸಾಗಿಸಿದ ಮತ್ತು ದುಡುಕುತನ, ನಿರ್ಲಕ್ಷ್ಯತನದ ಚಾಲನೆ ಹಾಗೂ ಯಾವುದೇ ಸುರಕ್ಷತಾ ನಿಯಮ ಗಳನ್ನು ಪಾಲಿಸದೇ ಬಸ್ ಚಲಾಯಿಸಿದ ಬಗ್ಗೆ ಬಸ್ ಚಾಲಕನಿಗೆ ಸೆ.25ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪೊಲೀಸ್ ನೋಟಿಸ್ ನೀಡಿ, ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ, ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಅದರಂತೆ ಬಸ್‌ನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸ ಲಾಗಿದೆ. ಬಸ್ಸಿನ ಚಾಲಕ ಶೈಲೇಶ್‌ನ ಚಾಲನಾ ಅನುಜ್ಞಾ ಪತ್ರವನ್ನು ಅಮಾನತು ಪಡಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಶಿಫಾರಸ್ಸು ಮಾಡಿದ್ದು, ಬಸ್ಸಿನ ಮಾಲಕರಿಗೆ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲು ನೋಟೀಸು ನೀಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.







