ವ್ಯಾಪಾರಿಯಿಂದ ಲಕ್ಷ ರೂ. ನಗದು ಸುಲಿಗೆ: ದೂರು
ಮಂಗಳೂರು, ಸೆ. 26: ಚಿನ್ನಾಭರಣದ ಕೆಲಸ ನಿಮಿತ್ತ ನಗರಕ್ಕೆ ಆಗಮಿಸಿದ ವ್ಯಾಪಾರಿಯೊಬ್ಬರಿಂದ ನಾಲ್ವರ ತಂಡ ಒಂದು ಲಕ್ಷ ರೂ. ಸುಲಿಗೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗದ ಘಟನೆ ಕಾರ್‌ಸ್ಟ್ರೀಟ್‌ನಲ್ಲಿ ನಡೆದಿದೆ.
ತೊಕ್ಕೊಟ್ಟು ಚಿನ್ನದ ವ್ಯಾಪಾರಿ ಅಹ್ಮದ್ ಎಂಬವರು ಬುಧವಾರ ಕಾರ್‌ಸ್ಟ್ರೀಟ್‌ನಲ್ಲಿ ಚಿನ್ನ ಕರಗಿಸಿ ಅದನ್ನು ಕಿಸೆಯಲ್ಲಿಟ್ಟು ಸುಮಾರು 1ಲಕ್ಷ ರೂ. ನಗದನ್ನು ಹಿಡಿದುಕೊಂಡು ಭವಂತಿ ಸ್ಟ್ರೀಟ್ ರಸ್ತೆಯತ್ತ ಹೋಗುತ್ತಿದ್ದರು. ಈ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಓಡಿ ಬಂದು ಅಹ್ಮದ್ ಹಿಡಿದುಕೊಂಡಿದ್ದ 1ಲಕ್ಷ ರೂ. ನಗದು ಎಗರಿಸಿಕೊಂಡು ಓಡಿ ಹೋಗಿದ್ದಾನೆ.
ಕೂಡಲೇ ಆತನನ್ನು ಅಹ್ಮದ್ ಬೆನ್ನಟ್ಟಿಕೊಂಡು ಹೋಗಿದ್ದಾರೆ. ಈ ವೇಳೆ ಆರೋಪಿ ನೋಂದಣಿ ಸಂಖ್ಯೆಯಿಲ್ಲದ ನೀಲಿ ಬಣ್ಣದ ಕಾರಿನತ್ತ ಓಡಿದ್ದಾನೆ. ಇದರಿಂದ ವಿಚಲಿತರಾದ ಕಾರಿನೊಳಗಿದ್ದವರು ಸೇರಿದಂತೆ ನಾಲ್ವರು ಕೂಡ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಬಂದರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಂಗಳೂರು ಉತ್ತರ (ಬಂದರು) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.







