ದಲಿತ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ: ಆರೋಪಿಗಳ ಬಂಧನ, ಪಿಎಸ್‍ಐ-ಸಿಪಿಐ ಅಮಾನತಿಗೆ ಒತ್ತಾಯ

ಮೈಸೂರು,ಸೆ.26: ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಯನ್ನು ಪೋಸ್ಕೊ ಹಾಗೂ ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಒತ್ತಾಯಿಸಿ ಹಾಗೂ ಕರ್ತವ್ಯ ನಿರ್ಲಕ್ಷದ ಆರೋಪದಡಿ ಪಿಎಸ್ಐ ಮತ್ತು ಸಿಪಿಐ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಭೀಮಾ ಜನಜಾಗೃತಿ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಪತ್ರಿಭಟನೆ ನಡೆಸಿದ ಮಹಾಸಭಾ ಕಾರ್ಯಕರ್ತರು, ವಿಜಯಪುರ ಜಿಲ್ಲೆ ದೇವರ ಹೆಪ್ಪರಗಿ ತಾಲೂಕಿನ ದಲಿತ ಸಮುದಾಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ಕಾಲೇಜಿಗೆ ಹೋಗಿ ಬರುವ ವೇಳೆ ದುಷ್ಕರ್ಮಿಗಳು ಅಪಹರಿಸಿ, ನಂತರ ಅತ್ಯಾಚಾರ ಎಸಗಿ ಹತ್ಯೆ ಮಾಡಿ ರಸ್ತೆ ಬದಿಯ ಕಾಲುವೆಗೆ ಬಿಸಾಡಿ ಹೋಗಿದ್ದು ಅಮಾನವೀಯ. ವಿದ್ಯಾರ್ಥಿನಿಯ ತಂದೆ-ತಾಯಿ ಕಲಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಶವ ಸಿಕ್ಕ ಮೇಲೆ ದೂರುದಾರರಿಗೆ ವಿಷಯ ತಿಳಿಸದೆ ಸಿಪಿಐ ಮತ್ತು ಕಲಗೇರಿಯ ಪಿಎಸ್ಐ ಶವ ಸಂಸ್ಕಾರವನ್ನು ಮಾಡಿದ್ದಾರೆ. ಕೂಡಲೇ ಆರೋಪಿಗಳನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಬೇಕು. ದೂರು ನೀಡಿದರೂ ವಿಷಯ ತಿಳಿಸದೇ ಶವ ಸಂಸ್ಕಾರ ಮಾಡಿರುವ ಆರೋಪಿಗಳಿಗೆ ರಕ್ಷಣೆ ಕೊಡುತ್ತಿರುವ ಸಿಪಿಐ ಹಾಗೂ ಕಲಗೇರಿಯ ಪಿಎಸ್ಐ ಅವರನ್ನು ಮಾನತು ಮಾಡಬೇಕು. ಎಸ್ಸಿ, ಎಸ್ಟಿ ದೌರ್ಜನ್ಯದಡಿ ಪ್ರಕರಣ ದಾಖಲಿಸಿ ನೊಂದ ಕುಟುಂಬಸ್ಥರಿಗೆ ಜಮೀನು ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯಲ್ಲಿ 25 ಲಕ್ಷ ರೂ.ಪರಿಹಾರ ನೀಡಬೇಕು. ಸ್ವಯಂ ಪ್ರೇರಿತವಾಗಿ ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗ ದೂರು ದಾಖಲಿಸಿ ತನಿಖೆ ಕೈಗೊಳ್ಳಬೇಕು. ಆರೋಪಿಗಳು ರಾಜಕೀಯ ಪ್ರಭಾವವುಳ್ಳವರಾಗಿರುವುದರಿಂದ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಂಕರ ಹಲಗಯ್ಯನಹುಂಡಿ, ಹೆಚ್.ಎಸ್.ರಾಚಯ್ಯ, ಟಿ.ಸೋಮಶೇಖರ್, ಇ.ಕೃಷ್ಣಮೂರ್ತಿ, ರವೀಶ್ ಡಿ.ಆರ್, ಇ.ಸಿದ್ದರಾಜು, ಎಸ್.ಸ್ವಾಮಿ, ಈರಪ್ಪ ಡಾ.ಬಸವರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.





