ರಾಣಾ ಅಯ್ಯುಬ್ ವಾಷಿಂಗ್ಟನ್ ಪೋಸ್ಟ್ ನ ಸಂಪಾದಕೀಯ ಲೇಖಕಿಯಾಗಿ ನೇಮಕ

ಹೊಸದಿಲ್ಲಿ: ಖ್ಯಾತ ಪತ್ರಕರ್ತೆ ರಾಣಾ ಅಯ್ಯುಬ್ ಅವರನ್ನು ವಾಷಿಂಗ್ಟನ್ ಪೋಸ್ಟ್ ತನ್ನ ಸಂಪಾದಕೀಯ ಪುಟದ ಜಾಗತಿಕ ವಿಶ್ಲೇಷಣೆ ವಿಭಾಗಕ್ಕೆ ನಿಯಮಿತವಾಗಿ ಬರೆಯುವ ಲೇಖಕಿಯಾಗಿ ನೇಮಿಸಿದೆ.
ಮುಂಬೈಯಲ್ಲಿರುವ ರಾಣಾ ಅಯ್ಯುಬ್ ಭಾರತದ ರಾಜಕೀಯ ಬೆಳವಣಿಗೆಗಳ ಬಗ್ಗೆ ವಾಷಿಂಗ್ಟನ್ ಪೋಸ್ಟ್ ಗೆ ಬರೆಯಲಿದ್ದಾರೆ.
ತನಿಖಾ ಪತ್ರಿಕೋದ್ಯಮದಲ್ಲಿ ಹಾಗು ಭಾರತದ ರಾಜಕೀಯ ಹಾಗು ಸಾಮಾಜಿಕ ವಿಷಯಗಳಲ್ಲಿ ದೀರ್ಘ ಅನುಭವವಿರುವ ದಿಟ್ಟ ಪತ್ರಕರ್ತೆ ರಾಣಾ ಅಯ್ಯುಬ್ ಅವರು ನಮ್ಮ ದಕ್ಷಿಣ ಏಷ್ಯಾ ವಿಭಾಗಕ್ಕೆ ಅತ್ಯುತ್ತಮ ಕೊಡುಗೆ ನೀಡಲಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ನ ಸಂಪಾದಕೀಯ ಪುಟದ ಸಂಪಾದಕ ಫ್ರೆಡ್ ಹಿಟ್ ಹೇಳಿದ್ದಾರೆ.
ಈ ಹಿಂದೆ ತೆಹೆಲ್ಕಾ ನಿಯತಕಾಲಿಕದಲ್ಲಿ ತನಿಖಾ ಪತ್ರಕರ್ತೆಯಾಗಿ ಕೆಲಸ ಮಾಡಿರುವ ರಾಣಾ ಭಾರತದ ರಾಜಕೀಯ, ಕೋಮು ಹಿಂಸೆ, ಎನ್ಕೌಂಟರ್ ಕೊಲೆಗಳು ಇತ್ಯಾದಿಗಳ ಬಗ್ಗೆ ಸಾಕಷ್ಟು ವರದಿ ಮಾಡಿದ್ದಾರೆ. ಗುಜರಾತ್ ನರಮೇಧದ ಕುರಿತು ಆಕೆ ಬೇರೆ ಹೆಸರಿನಲ್ಲಿ ಹೋಗಿ ಮಾಡಿರುವ ತನಿಖಾ ವರದಿಗಳು ಕೋಲಾಹಲ ಎಬ್ಬಿಸಿದ್ದವು. ಕೊನೆಗೆ ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಂಧನಕ್ಕೆ ಕಾರಣ ವಾಗಿದ್ದವು. ಆ ವರದಿಗಳ ಆಧರಿತ ಪುಸ್ತಕ Gujarat Files: Anatomy of a Cover Up ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಖ್ಯಾತಿ ಗಳಿಸಿತ್ತು.
ಈಗಾಗಲೇ ಭಾರತದಿಂದ ಖ್ಯಾತ ಪತ್ರಕರ್ತೆ ಬರ್ಖಾ ದತ್ ಅವರು ವಾಷಿಂಗ್ಟನ್ ಪೋಸ್ಟ್ ಗೆ ಸಂಪಾದಕೀಯ ಲೇಖಕಿಯಾಗಿದ್ದಾರೆ.







