ರಕ್ಷಣಾ ಇಲಾಖೆ ಸಿಬ್ಬಂದಿಗಳ ಬೇಡಿಕೆ ಈಡೇರದಿದ್ದರೆ ಡಿಜಿಕ್ಯುಎ ದಿನಾಚರಣೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಡಿಫೆನ್ಸ್ ಎಂಪ್ಲಾಯೀಸ್ ಫೆಡರೇಷನ್ ಉಪಾಧ್ಯಕ್ಷ ಎಂ.ಕೆ.ರವೀಂದ್ರನ್ ಪಿಳ್ಳೆ
ಬೆಂಗಳೂರು, ಸೆ.26: ರಕ್ಷಣಾ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳು ಭರ್ತಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ, ರಕ್ಷಣಾ ಇಲಾಖೆಯ ಡಿಫೆನ್ಸ್ ಆಫ್ ಕ್ವಾಲಿಟಿ ಅಷ್ಯೂರೆನ್ಸ್ (ಡಿಜಿಕ್ಯುಎ) ದಿನಾಚರಣೆಯೆಂದು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲಾಗುವುದು ಎಂದು ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯೀಸ್ ಫೆಡರೇಷನ್ ಉಪಾಧ್ಯಕ್ಷ ಎಂ.ಕೆ.ರವೀಂದ್ರನ್ ಪಿಳ್ಳೆ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ರಕ್ಷಣಾ ಇಲಾಖೆ ನೌಕರರ ಒಕ್ಕೂಟ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಕ್ಷಣಾ ನೌಕರರ ಹಲವು ನ್ಯಾಯಯುತವಾಗಿರುವ ಬೇಡಿಕೆಗಳು ನನೆಗುದಿಗೆ ಬಿದ್ದಿದೆ. ಇದನ್ನು ಈಡೇರಿಸುವುದು ಅಧಿಕಾರಿಗಳ ಕರ್ತವ್ಯವೆಂದು ತಿಳಿಸಿದರು.
ರಕ್ಷಣಾ ಇಲಾಖೆ ವತಿಯಿಂದ ಸೆ.27ರಂದು ನಡೆಯಲಿರುವ ಡಿಫೆನ್ಸ್ ಆಫ್ ಕ್ವಾಲಿಟಿ ಅಷ್ಯೂರೆನ್(ಡಿಜಿಕ್ಯುಎ) ದಿನಾಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಈ ಆಚರಣೆಯ ಮೊದಲು ತಮ್ಮ ಪ್ರಮುಖ ಬೇಡಿಕೆ ಈಡೇರಿಸಲು ಮೂರು ಒಕ್ಕೂಟಗಳು ಸೇರಿ ರಕ್ಷಣಾ ಕಾರ್ಯದರ್ಶಿ ಸುಭಾಷ್‌ಗೆ ಮನವಿ ಸಲ್ಲಿಸಿದ್ದೇವೆ. ಈ ಸಂಬಂಧ ಸಭೆ ಕರೆದು ಆಶ್ವಾಸನೆ ನೀಡದಿದ್ದರೆ ಪ್ರತಿಭಟನೆ ನಿಶ್ಚಿತ ಎಂದು ಅವರು ತಿಳಿಸಿದರು.
ಬೇಡಿಕೆಗಳು: ರಕ್ಷಣಾ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳು ಭರ್ತಿ ಮಾಡಬೇಕು. ನೇಮಕಾತಿ ನಿಯಮಗಳ ಸುಲಭವಾಗಿರಬೇಕು. ಸೇವೆಯಲ್ಲಿಯೇ ಮೃತಪಟ್ಟರೆ, ಕುಟುಂಬಸ್ಥರಿಗೆ ಸಹಾಯ ಹಾಗೂ ಅವಲಂಬಿತರನ್ನು ತಕ್ಷಣ ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ರಕ್ಷಣಾ ಇಲಾಖೆ ನೌಕರರ ಹಿತಕ್ಕಾಗಿ ಆಗ್ರಹಿಸಿ ರಾಷ್ಟ್ರವ್ಯಾಪ್ತಿ ಹೋರಾಟ ನಡೆಸಲಾಗುತ್ತಿದ್ದು, ಸೆ.27ರಂದು ಬೆಂಗಳೂರಿನ ಆರ್‌ಟಿ ನಗರದ ಡಿಫೆನ್ಸ್ ಕಚೇರಿ ಮುಂಭಾಗ ಸಾವಿರಾರು ನೌಕರರು ಪ್ರತಿಭಟಿಸಲಿದ್ದಾರೆ.
-ಎಂ.ಕೆ.ರವೀಂದ್ರನ್ ಪಿಳ್ಳೆ, ಉಪಾಧ್ಯಕ್ಷ, ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯೀಸ್ ಫೆಡರೇಷನ್







