ಪಾರ್ಶ್ವವಾಯು ತಡೆಗೆ ಕಾರ್ಡಿಯಾಕ್ ಅಕ್ಲೂಡರ್ ಚಿಕಿತ್ಸಾ ವಿಧಾನ ಬಳಕೆ

ಬೆಂಗಳೂರು, ಸೆ. 26: ಪದೇ ಪದೇ ಮರುಕಳಿಸುವ ಪಾರ್ಶ್ವವಾಯು (ಸ್ಟ್ರೋಕ್) ಆಘಾತವನ್ನು ತಡೆಗಟ್ಟಲು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಕಾರ್ಡಿಯಾಕ್ ಅಕ್ಲೂಡರ್ ಎಂಬ ಚಿಕಿತ್ಸಾ ವಿಧಾನವನ್ನು ಮೊದಲ ಬಾರಿಗೆ ಬಳಸಿದೆ.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಹೃದಯ ರೋಗಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ರಂಜನ್ ಶೆಟ್ಟಿ ಮಾತನಾಡಿ, ಪಾರ್ಶ್ವವಾಯು ಆಘಾತ ಸಾವು ಮತ್ತು ವೈಕಲ್ಯತೆಗೆ ಕಾರಣವಾಗುತ್ತದೆ. ಈ ಆಘಾತಕ್ಕೆ ಪ್ರಾಥಮಿಕ ಕಾರಣ ಎಂದರೆ ಏಟ್ರಿಯಲ್ ಫೈಬ್ರಿಲೇಷನ್ ಆಗಿರುತ್ತದೆ. ಈ ಸ್ಥಿತಿಯಲ್ಲಿ ಹೃದಯದ ಮೇಲ್ಭಾಗದ ಗೂಡು (ಏಟ್ರಿಯಮ್)ಗಳು ಸರಿಯಾಗಿ ಸಂಕುಚಿತವಾಗುವುದಿಲ್ಲ. ಇದರಿಂದ ರಕ್ತ ಗಡ್ಡೆ ಕಟ್ಟುತ್ತದೆ. ಈ ಗಡ್ಡೆಗಳು ದೇಹದ ಯಾವುದೇ ಭಾಗಕ್ಕೆ ತೆರಳಬಹುದಾಗಿರುತ್ತದೆ. ಇದು ಮೆದುಳಿನ ರಕ್ತ ಪೂರೈಕೆಗೆ ಅಡ್ಡಿವುಂಟು ಮಾಡಿದಾಗ ಪಾರ್ಶ್ವವಾಯುವಿಗೆ ದಾರಿಯಾಗುತ್ತದೆ ಎಂದರು.
ಅಲ್ಲದೆ, 90 ವರ್ಷದ ವಯಸ್ಸಿನವರೊಬ್ಬರು ಪಾರ್ಶ್ವವಾಯು ಆಘಾತಕ್ಕೆ ಗುರಿಯಾಗಿದ್ದರು. ಅವರು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತೆಗೆ ಬಂದಾಗ ಅವರ ಸ್ಥಿತಿಯನ್ನು ಪರಿಗಣಿಸಿ ಪಾರ್ಶ್ವವಾಯು ಆಘಾತ ಕಡಿಮೆ ಮಾಡಿ ರಕ್ತ ತಿಳಿಗೊಳಿಸಲು ಔಷಧಗಳನ್ನು ನೀಡಲಾಗಿತ್ತು. ಆದರೆ ಔಷಧಗಳಿಂದ ಅವರಿಗೆ ಸಂಕೀರ್ಣ ತೊಂದರೆಗಳು ಉಂಟಾಗುತ್ತಿದ್ದವು. ಆದ್ದರಿಂದ ರಕ್ತ ಗಡ್ಡೆ ಕಟ್ಟುವುದನ್ನು ತಡೆಯುವುದರಿಂದ ಎಡ ಏಟ್ರಿಯಾ ಭಾಗವನ್ನು ಮುಚ್ಚಿಹಾಕುವುದು ಅನಿರ್ವಾಯ ಆಗಿತ್ತು. ಇದರಿಂದ ರಕ್ತದ ಗಡ್ಡೆಗಳು ಹೊರಬರದಂತೆ ತಡೆಯಲಾಗಿತ್ತು ಎಂದು ಹೇಳಿದರು.
ಹೀಗಾಗಿ ಕಾರ್ಡಿಯಾಕ್ ಅಕ್ಲೂಡರ್ ನವೀನ ಮತ್ತು ಪರಿಣಾಮಕಾರಿ ಉಪಕರಣವೊಂದನ್ನು ಬಳಸಿ ಎಡ ಏಟ್ರಿಯಾ (ಅಪೆಂಡೇಜ್) ಭಾಗವನ್ನು ಮುಚ್ಚಲಾಯಿತು. ಹೀಗೆ ಅಪೆಂಡೇಜ್‌ನ್ನು ಮುಚ್ಚಿದ ನಂತರ ರಕ್ತ ತಿಳಿಗೊಳಿಸಲು ಔಷಧಗಳನ್ನು ನಿಲ್ಲಿಸುವುದರೊಂದಿಗೆ ಭವಿಷ್ಯದ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲಾಯಿತು ಎಂದರು.