ಅತಿದೊಡ್ಡ ಹನಿಟ್ರ್ಯಾಪ್ ನಲ್ಲಿ ದೊಡ್ಡ ತಲೆಗಳು: 8 ಮಾಜಿ ಸಚಿವರ ವಿಚಾರಣೆ
1 ಸಾವಿರಕ್ಕೂ ಅಧಿಕ ವಿಡಿಯೋ, ಆಡಿಯೋಗಳು ಪತ್ತೆ

ಭೋಪಾಲ, ಸೆ. 27: ಮಧ್ಯಪ್ರದೇಶದಲ್ಲಿ ಹೈ ಪ್ರೊಫೈಲ್ ಹನಿಟ್ರ್ಯಾಪ್, ಸುಲಿಗೆ ಜಾಲವನ್ನು ಬೇಧಿಸಿರುವ ಪೊಲೀಸರು 12ಕ್ಕೂ ಅಧಿಕ ಉನ್ನತ ಅಧಿಕಾರಿಗಳು ಹಾಗೂ 8 ಮಾಜಿ ಸಚಿವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ದಂಧೆಗೆ ಸಂಬಂಧಿಸಿ 1 ಸಾವಿರಕ್ಕೂ ಅಧಿಕ ವಿಡಿಯೋ, ಆಡಿಯೋ ಕ್ಲಿಪ್‌ಗಳು ಹಾಗೂ ಸಂಭಾಷಣೆಗಳು ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್‌ಗಳಲ್ಲಿ ಪತ್ತೆಯಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ 5 ಮಹಿಳೆಯರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅವರನ್ನು ಶ್ವೇತಾ ಜೈನ್ (39), ಶ್ವೇತಾ ಜೈನ್ (48), ಬರ್ಖಾ ಸೋನಿ (35), ಆರತಿ ದಯಾಳ್ (34), ಆಕೆಯ ವಾಹನದ ಚಾಲಕ ಹಾಗೂ ಕಾಲೇಜು ವಿದ್ಯಾರ್ಥಿ (18) ಎಂದು ಗುರುತಿಸಲಾಗಿದೆ.
ಪ್ರತಿಯೋರ್ವ ಮಹಿಳೆ ಸ್ವಂತ ಗ್ಯಾಂಗ್ ನಡೆಸುತ್ತಿದ್ದರು. ಬರ್ಖಾ ಸೋನಿ ಕಾಂಗ್ರೆಸ್‌ನ ಮಾಹಿತಿ ಹಾಗೂ ತಂತ್ರಜ್ಞಾನ ಘಟಕದ ಮಾಜಿ ಅಧಿಕಾರಿ ಅಮಿತ್ ಸೋನಿ ಪತ್ನಿ. ಸರಕಾರೇತರ ಸಂಸ್ಥೆ ನಡೆಸುತ್ತಿರುವ ಹಾಗೂ ಬಿಜೆಪಿ ಶಾಸಕ ಬ್ರಿಜೇಂದ್ರ ಪ್ರತಾಪ್ ಸಿಂಗ್ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿರುವ 48ರ ಹರೆಯದ ಶ್ವೇತಾ ಜೈನ್ ಈ ದಂಧೆಯ ಪ್ರಧಾನ ರೂವಾರಿ. ಈಕೆ ಮಹಾರಾಷ್ಟ್ರದ ಮರಾಠವಾಡ ವಲಯದ ಪ್ರಭಾವಿ ನಾಯಕರ ನಿಕಟವರ್ತಿ ಎಂದು ಹೇಳಲಾಗುತ್ತಿದೆ.
ಆರೋಪಿಗಳಿಂದ ಲಾಭ ಪಡೆದ 10ಕ್ಕೂ ಅಧಿಕಾರಿಗಳ ತನಿಖೆ ನಡೆಸಲಾಗುತ್ತಿದೆ ಎಂದು ದಂಧೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿರುವ ಪೊಲೀಸ್ ಅಧಿಕಾರಿ ಸಂಜೀವ್ ಶಾಮಿ ಹೇಳಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಸೇರಿದ ರಾಜಕಾರಣಿಗಳು ವೀಡಿಯೊ ತುಣುಕಿನಲ್ಲಿ ಇದ್ದಾರೆ. ಮಧ್ಯಪ್ರದೇಶದ ಆಚೆಗೂ ಈ ಜಾಲ ವ್ಯಾಪಿಸಿರುವ ಸಾಧ್ಯತೆ ಇದೆ. ಪ್ರಭಾವಿ ವ್ಯಕ್ತಿಗಳನ್ನು ಬಲೆಗೆ ಬೀಳಿಸಿ ಅವರು ಕೇಳಿದ್ದನ್ನು ಕೊಟ್ಟು. ಅವರಿಂದ ಮತ್ತೊಂದನ್ನು ವಿನಿಮಯ ರೂಪದಲ್ಲಿ ಪಡೆಯುವ (ಕ್ವಿಡ್ ಪ್ರೊ ಕ್ಯೂ) ಅತಿ ದೊಡ್ಡ ಲೈಂಗಿಕ ಹಗರಣದ ಜಾಲ ಇದಾಗಿದೆ ಎಂದು ಶಮಿ ತಿಳಿಸಿದ್ದಾರೆ.
ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಆಕರ್ಷಿಸಲು ಕೆಳ ಮಧ್ಯಮ ವರ್ಗದ ಕುಟುಂಬಗಳ ಕಾಲೇಜು ಕಲಿಯುತ್ತಿರುವ 12ಕ್ಕೂ ಅಧಿಕ ಯುವತಿಯರನ್ನು ಬಳಸಿಕೊಳ್ಳಲಾಗಿದೆ. ಉದ್ಯೋಗ, ಐಷಾರಾಮಿ ಜೀವನದ ಆಸೆ ತೋರಿಸಿ ಅವರನ್ನು ಸೆಳೆಯಲಾಗುತ್ತದೆ ಎಂದು ಶ್ವೇತಾ ಜೈನ್ ಪೊಲೀಸರ ವಿಚಾರಣೆ ಸಂದರ್ಭ ತಿಳಿಸಿದ್ದಾಳೆ.







