ಕರ್ನಾಟಕಕ್ಕೆ 123 ರನ್ ಗೆಲುವು
► ಪವನ್, ದೇವದತ್ತ, ಮನೀಷ್ ಅರ್ಧಶತಕ, ಗೌತಮ್‌ಗೆ 5 ವಿಕೆಟ್ ಗೊಂಚಲು ► ವಿಜಯ ಹಝಾರೆ ಟ್ರೋಫಿ

ಬೆಂಗಳೂರು, ಸೆ.26: ಪವನ್ ದೇಶಪಾಂಡೆ(70), ದೇವದತ್ತ ಪಡಿಕ್ಕಲ್(58) ಹಾಗೂ ಮನೀಷ್ ಪಾಂಡೆ(52) ಅವರ ಅರ್ಧಶತಕಗಳ ಕೊಡುಗೆ, ಕೆ.ಗೌತಮ್ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧ ಗುರುವಾರ ನಡೆದ ವಿಜಯ ಹಝಾರೆ ಟ್ರೋಫಿ ಪಂದ್ಯದಲ್ಲಿ 123 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ನಾಲ್ಕು ಅಂಕ ಗಳಿಸಿದೆ.
ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಟಾಸ್ ಜಯಿಸಿದ ಜಾರ್ಖಂಡ್ ತಂಡ ಕರ್ನಾಟಕವನ್ನು ಬ್ಯಾಟಿಂಗ್‌ಗೆ ಇಳಿಸಿತು. ಕರ್ನಾಟಕ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 285 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಜಾರ್ಖಂಡ್ ತಂಡ ಕೃಷ್ಣಪ್ಪ ಗೌತಮ್(5-43)ಸ್ಪಿನ್ ಮೋಡಿಗೆ ತತ್ತರಿಸಿ 37.5 ಓವರ್‌ಗಳಲ್ಲಿ ಕೇವಲ 162 ರನ್‌ಗೆ ಆಲೌಟಾಯಿತು.
ಜಾರ್ಖಂಡ್ ಪರ ಸೌರಭ್ ತಿವಾರಿ(43, 54 ಎಸೆತ. 6 ಬೌಂಡರಿ)ಸರ್ವಾಧಿಕ ರನ್ ಗಳಿಸಿದರು. ಆನಂದ್ ಸಿಂಗ್(32)ರಾಯ್(26) ಹಾಗೂ ವಿರಾಟ್ ಸಿಂಗ್(21)ಎರಡಂಕೆಯ ಸ್ಕೋರ್ ಗಳಿಸಿದರು. ಎರಡು ವಿಕೆಟ್ ಪಡೆದ ಇನ್ನೋರ್ವ ಸ್ಪಿನ್ನರ್ ಶ್ರೇಯಸ್ ಗೋಪಾಲ್(2-39)ಗೌತಮ್‌ಗೆ ಉತ್ತಮ ಸಾಥ್ ನೀಡಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಕೆಎಲ್ ರಾಹುಲ್(29) ಹಾಗೂ ದೇವದತ್ತ ಪಡಿಕ್ಕಲ್(58, 83 ಎಸೆತ, 7 ಬೌಂಡರಿ)ಮೊದಲ ವಿಕೆಟ್ ಜೊತೆಯಾಟದಲ್ಲಿ 75 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
ಕರ್ನಾಟಕ ಒಂದು ಹಂತದಲ್ಲಿ 143 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ 4ನೇ ವಿಕೆಟ್‌ಗೆ 76 ರನ್ ಸೇರಿಸಿದ ಮನೀಷ್ ಪಾಂಡೆ(52, 44 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ದೇಶಪಾಂಡೆ(70, 59 ಎಸೆತ, 7 ಬೌಂಡರಿ, 1 ಸಿಕ್ಸರ್)ತಂಡಕ್ಕೆ ಆಸರೆಯಾದರು.
ಈ ಇಬ್ಬರು ಬೇರ್ಪಟ್ಟ ಬಳಿಕ ಕರ್ನಾಟಕ ದೊಡ್ಡ ಜೊತೆಯಾಟ ನಡೆಸಲಿಲ್ಲ. ದೇಶಪಾಂಡೆ ಕೊನೆಯ ಓವರ್‌ನ 3ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ತಂಡದ ಪರ ಗರಿಷ್ಠ ಮೊತ್ತ ಗಳಿಸಿದರು.
ಜಾರ್ಖಂಡ್‌ನ ಪರ ರಾಹುಲ್ ಶುಕ್ಲಾ(4-43) ಹಾಗೂ ಆನಂದ್ ಸಿಂಗ್(4-52)ತಲಾ ನಾಲ್ಕು ವಿಕೆಟ್‌ಗಳನ್ನು ಪಡೆದರು.
ಸಂಕ್ಷಿಪ್ತ ಸ್ಕೋರ್
► ಕರ್ನಾಟಕ: 50 ಓವರ್‌ಗಳಲ್ಲಿ 285/9
(ಪವನ್ ದೇಶಪಾಂಡೆ 70, ದೇವದತ್ತ ಪಡಿಕ್ಕಲ್ 58, ಮನೀಷ್ ಪಾಂಡೆ 52, ರಾಹುಲ್ 29, ರಾಹುಲ್ ಶುಕ್ಲಾ 4-43, ಆನಂದ್ ಸಿಂಗ್ 4-43)
► ಜಾರ್ಖಂಡ್: 37.5 ಓವರ್‌ಗಳಲ್ಲಿ 162 ರನ್‌ಗೆ ಆಲೌಟ್
(ಸೌರಭ್ ತಿವಾರಿ 43, ಆನಂದ್ ಸಿಂಗ್ 32, ಎಸ್‌ಎಸ್ ರಾಯ್ 26, ಕೆ.ಗೌತಮ್ 5-43, ಗೋಪಾಲ್ 2-39)







