ಸೆ.28ರಿಂದ ಬೃಹತ್ ಜನಸಂಪರ್ಕ ಅಭಿಯಾನ

ಬೆಂಗಳೂರು, ಸೆ. 26: ಬಿಬಿಎಂಪಿ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ಬೃಹತ್ ಜನಸಂಪರ್ಕ ಅಭಿಯಾನವನ್ನು ಸೆ.28ರಿಂದ 50 ದಿನಗಳ ಕಾಲ ನಡೆಸುವುದಾಗಿ ಪಕ್ಷದ ಸಂಚಾಲಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.29ರಂದು ವಿಜಯನಗರದ ವಲಯದಲ್ಲಿ ಪಾದಯಾತ್ರೆ ಮೂಲಕ ಜನಸಂಪರ್ಕಾಭಿಯಾನಕ್ಕೆ ಚಾಲನೆ ನೀಡಲಾಗುವುದು. ಮನೆ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡುವ ತಂಡಗಳ ರಚನೆ, ರಾಜಕೀಯ ಸೇರ್ಪಡೆ ಅಭಿಯಾನ, ವಿಜಯನಗರ, ಶಾಂತಿನಗರ, ಸಿ.ವಿ.ರಾಮನ್ ನಗರ, ಶಿವಾಜಿನಗರ ಸೇರಿದಂತೆ ನಗರದಾದ್ಯಂತ ವಾರ್ಡ್‌ಗಳಿಗೆ ಸಮರ್ಥ ಮತ್ತು ಸೇವಾ ಮನೋಭಾವವುಳ್ಳ ಅಭ್ಯರ್ಥಿಗಳ ಆಯ್ಕೆ ಮಾಡುವುದು ಸೇರಿದಂತೆ ವಿವಿಧ ರೀತಿಯ ಅಭಿಯಾನಗಳ ಪಟ್ಟಿ ತಯಾರು ಮಾಡಲಾಗಿದೆ ಎಂದು ತಿಳಿಸಿದರು.
ಎಲ್ಲ ವಾರ್ಡ್‌ಗಳಲ್ಲಿಯೂ ಜನಸಂಪರ್ಕ ಅಭಿಯಾನದ ಮೂಲಕ ನಗರದ ಸಮಸ್ಯೆಗಳ ಪರಹಾರಕ್ಕೆ ನಾವೀನ್ಯ ಯೋಜನೆಗಳನ್ನು ರೂಪಿಸಲಾಗುವುದು ಜನಸಂಪರ್ಕ ಅಭಿಯಾನದೊಂದಿಗೆ ಪಕ್ಷದ ಜೊತೆ ಕೈಜೋಡಿಸುವ ಜನರಿಗೆ ಪಕ್ಷದ ಸದಸ್ಯತ್ವ ನೀಡಲಾಗುವುದು. ಪಕ್ಷದ ಸದಸ್ಯತ್ವ ಪಡೆಯುವ ಆಸಕ್ತರು ಮೊ.ಸಂ: 74120 42042 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.





