ಈ ವರ್ಷದ ಸ್ವದೇಶಿ ಟೆಸ್ಟ್ ಸರಣಿಗೆ ಜಸ್‌ಪ್ರೀತ್ ಬುಮ್ರಾ ಅಲಭ್ಯ
ವಿಂಡೀಸ್ ವಿರುದ್ಧ ಟ್ವೆಂಟಿ-20 ಸರಣಿಗೆ ವಾಪಸ್ ಸಾಧ್ಯತೆ

ಹೊಸದಿಲ್ಲಿ, ಸೆ.26: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲು ಕೇವಲ ಒಂದು ವಾರ ಬಾಕಿ ಇರುವಾಗಲೇ ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್ ತೀವ್ರ ಹಿನ್ನಡೆ ಅನುಭವಿಸಿದೆ. ಬೆನ್ನುನೋವಿನ ಕಾರಣದಿಂದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಸಂಪೂರ್ಣ ಸರಣಿಯಿಂದ ಹೊರಗು ಳಿದಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಅವರು ಪ್ರಮುಖ ವೇಗದ ಬೌಲರ್ ಬುಮ್ರಾ ಸಂಪೂರ್ಣ ಚೇತರಿಸಿಕೊಂಡು ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯುವ ಟ್ವೆಂಟಿ-20 ವಿಶ್ವಕಪ್ ವೇಳೆಗೆ ಫಿಟ್ ಆಗಿರಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ. ‘‘ವೆಸ್ಟ್‌ಇಂಡೀಸ್ ವಿರುದ್ದ ಸೀಮಿತ ಓವರ್ ಸರಣಿಯಲ್ಲಿ ಬುಮ್ರಾ ವಾಪಸ್ ಆಗಬೇಕೆಂದು ತಂಡ ಬಯಸುತ್ತಿದೆ. ಟೀಮ್ ಮ್ಯಾನೇಜ್‌ಮೆಂಟ್ ಅಡ್ಡದಾರಿ ಹಿಡಿಯದೇ, ಬುಮ್ರಾರನ್ನು ಸರಿಯಾಗಿ ಪುನಶ್ಚೇತನಗೊಳಿಸಿ ಸಂಪೂರ್ಣ ಫಿಟ್ ಆಗಿಸಲು ಬಯಸಿದೆ. ಬುಮ್ರಾ ಮರಳಿಕೆಗೆ ಬಾಂಗ್ಲಾದೇಶ ಸರಣಿ ಅವಸರವೆನಿಸಲಿದೆ’’ ಎಂದು ಮೂಲಗಳು ತಿಳಿಸಿವೆ.
ಬುಮ್ರಾ ಈ ವರ್ಷ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಭಿಯಾನದಲ್ಲಿ ಭಾಗವಹಿಸುವುದಿಲ್ಲ. ಮುಂಬರುವ ಟ್ವೆಂಟಿ-20 ವಿಶ್ವಕಪ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ ಈ ವರ್ಷ ಸೀಮಿತ ಓವರ್ ಕ್ರಿಕೆಟ್‌ನ್ನು ಹೆಚ್ಚು ಆಡಲಿದೆ. ದ.ಆಫ್ರಿಕ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
ಭಾರತದ ಆಟಗಾರರು ಬಿಡುವಿಲ್ಲದ ಕ್ರಿಕೆಟ್ ಆಡುತ್ತಿದ್ದಾರೆ. ಬುಮ್ರಾರಂತಹ ಆಟಗಾರರು ಗಾಯಗೊಳ್ಳುವುದನ್ನು ತಪ್ಪಿಸಲು ಕೆಲಸದ ಭಾರ ಕಡಿಮೆಗೊಳಿಸುವ ಅಗತ್ಯವಿದೆ ಎಂದು ನಾಯಕ ಕೊಹ್ಲಿ ಒತ್ತಾಯಿಸಿದ್ದಾರೆ.
‘‘ಆಟಗಾರರ ಕೆಲಸದ ಭಾರವನ್ನು ನಿಭಾಯಿಸುವುದು ನಮಗೆ ಅತ್ಯಂತ ಮುಖ್ಯ ವಿಚಾರವಾಗಿದೆ. ಹೀಗಾಗಿ ಅವರು(ಬುಮ್ರಾ)ವಿಶ್ವಕಪ್‌ನ ಬಳಿಕ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಆಡಿರಲಿಲ್ಲ. ಅವರು ಟೆಸ್ಟ್ ಕ್ರಿಕೆಟ್‌ಗೆ ಸಜ್ಜಾಗಲು ಈ ಹೆಜ್ಜೆ ಇಟ್ಟಿದ್ದರು. ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬುಮ್ರಾ ನಮ್ಮ ಪ್ರಮುಖ ಆಟಗಾರನಾಗಿದ್ದಾರೆ. ಅವರು ಎಷ್ಟೊಂದು ಉತ್ತಮ ಬೌಲರ್ ಎಂದು ನಮಗೆ ಗೊತ್ತಿದೆ. ಸ್ಪೆಲ್‌ನಲ್ಲಿ ಅವರು ಪರಿಣಾಮಬೀರಬಲ್ಲರು’’ ಎಂದು ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಉತ್ತಮ ಸ್ಪೆಲ್ ಎಸೆದಿದ್ದ ಬುಮ್ರಾ ಬಗ್ಗೆ ಕೊಹ್ಲಿ ಹೇಳಿಕೆ ನೀಡಿದ್ದರು.







