ನಿಕ್ ಕಿರ್ಗಿಯೊಸ್‌ಗೆ 6 ವಾರ ನಿರ್ಬಂಧ ಶಿಕ್ಷೆ
ಅತಿರೇಕದ ವರ್ತನೆ

ಕ್ಯಾನ್‌ಬೆರ್ರ,ಸೆ.26: ಅಮೆರಿಕದ ಸಿನ್ಸಿನಾಟಿಯಲ್ಲಿ ಕಳೆದ ತಿಂಗಳು ನಡೆದ ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್‌ನಲ್ಲಿ ತೋರಿದ ಅತಿರೇಕದ ವರ್ತನೆಗಾಗಿ ಆಸ್ಟ್ರೇಲಿಯ ಟೆನಿಸ್ ಆಟಗಾರ ನಿಕ್ ಕಿರ್ಗಿಯೊಸ್‌ಗೆ ಆರು ವಾರಗಳ ನಿರ್ಬಂಧ ಮತ್ತು 113,000 ಡಾಲರ್ (80 ಲಕ್ಷ ರೂ.) ದಂಡ ವಿಧಿಸಲಾಗಿದೆ. ಸಿನ್ಸಿನಾಟಿಯಲ್ಲಿ ಕರೆನ್ ಕಶನೊವ್ ವಿರುದ್ಧ ನಡೆದ ಪಂದ್ಯದಲ್ಲಿ ಕಿರ್ಗಿಯೊಸ್ ಅಂಪೈರ್‌ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮತ್ತು ಅಧಿಕಾರಿಯತ್ತ ಉಗುಳಿದ್ದೂ ಸೇರಿದಂತೆ ಒಟ್ಟು ಎಂಟು ಅಪರಾಧಗಳನ್ನು ಮಾಡಿದ್ದಾರೆ ಎಂದು ಈ ಕುರಿತು ಎಟಿಪಿ ನಡೆಸಿದ ತನಿಖೆಯಲ್ಲಿ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಕಿರ್ಗಿಯೊಸ್‌ಗೆ ಆರು ವಾರಗಳ ನಿರ್ಬಂಧ ಮತ್ತು ದಂಡ ಶಿಕ್ಷೆ ವಿಧಿಸಲಾಗಿದೆ. ಅಷ್ಟು ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಅವರು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳದಿದ್ದರೆ ಹೆಚ್ಚುವರಿ 25,000 ಡಾಲರ್ (18 ಲಕ್ಷ ರೂ.) ದಂಡ ತೆರಬೇಕಾಗುತ್ತದೆ ಎಂದು ಎಟಿಪಿ ತಿಳಿಸಿದೆ. ಸದ್ಯ ನಿರ್ಬಂಧ ಮತ್ತು ಹೆಚ್ಚುವರಿ ದಂಡ ಶಿಕ್ಷೆಯನ್ನು ಅಮಾನತಿನಲ್ಲಿಡಲಾಗಿದ್ದು ಕಿರ್ಗಿಯೊಸ್‌ಗೆ ಆರು ತಿಂಗಳ ಪರೀಕ್ಷಾ ಅವಧಿಯನ್ನು ನೀಡಲಾಗಿದೆ. ಈ ಅವಧಿಯಲ್ಲಿ ಎಟಿಪಿ ವಿಧಿಸಿರುವ ಕೆಲವು ಷರತ್ತುಗಳನ್ನು ಕಿರ್ಗಿಯೊಸ್ ಪಾಲಿಸಬೇಕಾಗುತ್ತದೆ.
ಅಧಿಕಾರಿಗಳ, ಅಭಿಮಾನಿಗಳ ಮತ್ತ್ತು ಇತರರಿಗೆ ಮೈದಾನದೊಳಗೆ ವೌಖಿಕ ಅಥವಾ ದೈಹಿಕ ಅವಮಾನ, ಕ್ರೀಡಾಸ್ಫೂರ್ತಿ ಪ್ರದರ್ಶಿಸದಿರುವುದು ಮತ್ತು ಅಧಿಕಾರಿಗಳನ್ನು ಗುರಿ ಮಾಡಿ ನಡೆಸುವ ಅಶ್ಲೀಲತೆ ಇತ್ಯಾದಿ ಕ್ರೀಡಾ ಸಂಹಿತೆಯನ್ನು ಉಲ್ಲಂಘಿಸುವಂತಹ ಘಟನೆಗಳಲ್ಲಿ ತೊಡಗಿಕೊಳ್ಳಬಾರದು ಎಂದು ಈ ಷರತ್ತಿನಲ್ಲಿ ತಿಳಿಸಲಾಗಿದೆ.





