ಭಿಕ್ಷಾಟನೆ: ಐವರು ಮಕ್ಕಳ ರಕ್ಷಣೆ
ಮಂಗಳೂರು, ಸೆ.26: ನಗರದಲ್ಲಿ ಮಕ್ಕಳನ್ನು ಹಿಡಿದುಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದ ನಾಲ್ವರ ವಿರುದ್ಧ ಚೈಲ್ಡ್‌ಲೈನ್‌ನವರು ಪ್ರಕರಣ ದಾಖಲಿಸಿ ಐವರು ಮಕ್ಕಳನ್ನು ರಕ್ಷಿಸಿದ್ದಾರೆ.
ನಗರದ ಜ್ಯೋತಿ ಜಂಕ್ಷನ್ ಬಳಿ ಪೋಷಕರು ಮಕ್ಕಳನ್ನು ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರಿಂದ ಮಂಗಳೂರು ಚೈಲ್ಡ್‌ಲೈನ್- 1098ಕ್ಕೆ ಮಾಹಿತಿ ಬಂದ ಮೇರೆಗೆ ಕಾರ್ಯಾಚರಣೆ ನಡೆಯಿತು.
ಚೈಲ್ಡ್‌ಲೈನ್ ತಂಡವು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪಾಂಡೇಶ್ವರ ಪೊಲೀಸ್ ಠಾಣಾ ಸಿಬ್ಬಂದಿ ಮತ್ತು ಪಚ್ಚನಾಡಿಯ ನಿರಾಶ್ರಿತರ ಪುನರ್ವಸತಿ ಕೇಂದ್ರದ ಸಿಬ್ಬಂದಿ ಜತೆಗೆ ಸ್ಥಳಕ್ಕೆ ಧಾವಿಸಿದಾಗ ಭಿಕ್ಷೆ ಬೇಡುತ್ತಿದ್ದವರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಕಂಡು ಬಂದಿದ್ದು, ಅಲ್ಲಿಂದ ಅವರನ್ನು ರಕ್ಷಿಸಿದರು.
ಬಳಿಕ ಹೆತ್ತವರ ಮೇಲೆ ಎ್ಐಆರ್ ದಾಖಲು ಮಾಡಿದ್ದು (ನಿರಾಶ್ರಿತರ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು) ಓರ್ವ ಗಂಡಸು ಮತ್ತು ಮೂರು ಹೆಂಗಸರಿಗೆ ಪುನರ್ವಸತಿ ಕಲ್ಪಿಸಲಾಯಿತು. ಮಕ್ಕಳನ್ನು (3 ಗಂಡು, 2 ಹೆಣ್ಣು) ಚೈಲ್ಡ್‌ಲೈನ್ ತಂಡವು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸುವ ಮೂಲಕ ಪುನರ್ವಸತಿಯನ್ನು ಕಲ್ಪಿಸಿಕೊಟ್ಟಿದೆ.
ಈ ರಕ್ಷಣಾ ತಂಡದಲ್ಲಿ ಚೈಲ್ಡ್‌ಲೈನ್- 1098 ದ.ಕ. ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ತಂಡದ ಸದಸ್ಯರಾದ ನಾಗರಾಜ್ ಪಣಕಜೆ, ಆಶಾಲತ, ಅನುಶಾ ಹಾಗೂ ರಂಜಿತ್ ಮತ್ತು ನಿರಾಶ್ರಿತರ ಪುನರ್ವಸತಿ ಕೇಂದ್ರದ ಅಧೀಕ್ಷಕರಾದ ಅಶೋಕ್ ಶೆಟ್ಟಿ, ನರೇಶ್‌ಕುಮಾರ್, ಫ್ರಾನ್ಸಿಸ್ ಮತ್ತು ಪೊಲೀಸ್ ಠಾಣೆಯ ಆಂಜನಪ್ಪ ಮತ್ತು ಸಿಬಂದಿ ಹಾಗೂ ಮಂಗಳೂರು ವಿ.ವಿ.ಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ನಿಶ್ಮಿತಾ, ಪೂಜಾ ಮತ್ತು ರೇಷ್ಮಾ ಭಾಗವಹಿಸಿದ್ದರು.







