ಲಂಚ ಪಡೆದ ಆರೋಪ: ಒಂದೇ ಠಾಣೆಯ ಮೂವರು ಪೊಲೀಸರು ಅಮಾನತು

ಚಾಮರಾಜನಗರ: ಲಂಚ ಪಡೆದ ಆರೋಪದ ಮೇಲೆ ಒಂದೇ ಠಾಣೆಯ ಮೂವರು ಪೊಲೀಸರು ಅಮಾನತುಗೊಂಡ ಘಟನೆ ನಡೆದಿದೆ.
ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‍ಐ ನಾಗಮ್ಮ, ಎಎಸ್‍ಐ ನಂಜಪ್ಪ, ಮುಖ್ಯ ಪೇದೆ ಶಂಕರ್ ಅವರನ್ನು ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಮಾನತು: ಚಾಮರಾಜನಗರ ಹೊರವಲಯದ ಸೋಮವಾರಪೇಟೆ ಸಮೀಪ ಹಣ ಪಡೆದು ರಶೀದಿ ನೀಡದೆ ಪಿಎಸ್‍ಐ ನಾಗಮ್ಮ ಅವರ ಸಮಕ್ಷಮದಲ್ಲೇ ಲೋಪ ಎಸಗಿದ ವಿಡಿಯೋ ವೈರಲ್ ಆಗಿತ್ತು. ಇದರ ಬಗ್ಗೆ ಸ್ಪಷ್ಟನೆ ಕೇಳಿದರೆ ಉತ್ತರ ಹೇಳಲು ನಿರಾಕರಿಸಿದ ಅಧೀಕ್ಷಕರು ಮೌನವಹಿಸಿದ್ದರು ಎನ್ನಲಾಗಿದೆ.
ನಂತರ ಇಬ್ಬರನ್ನೂ ತಮ್ಮ ಕಚೇರಿಯ ಡಿಸಿಆರ್‍ಬಿ ವಿಭಾಗಕ್ಕೆ ನಿಯೋಜನೆಗೊಳಿಸಿ ಸುಮ್ಮನಾಗಿದ್ದರು. ಒಂದೆರಡು ದಿನದಲ್ಲಿ ಮತ್ತೆ ಎಎಸ್‍ಐ ನಂಜಪ್ಪ ಎಂಬವರ ಹಣ ಪಡೆಯುವ ವಿಡಿಯೋ ವೈರಲ್ ಆಗಿತ್ತು ಎನ್ನಲಾಗಿದ್ದು, ಆ ವಿಡಿಯೊ ವೈರಲ್ ಆದ ಕೂಡಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದ್ ಕುಮಾರ್ ಎಎಸ್ಐ ನಂಜಪ್ಪ ಅವರನ್ನು ಕೂಡಲೇ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ 'ಒಬ್ಬರಿಗೆ ಅಮಾನತು, ಮತ್ತೊಬ್ಬರಿಗೆ ವರ್ಗಾವಣೆಯ ಶಿಕ್ಷೆ ಎಷ್ಟು ಸರಿ? ಇಬ್ಬರೂ ಮಾಡಿದ್ದು ಒಂದೇ ತಪ್ಪು. ಬೇರೆ ಬೇರೆ ಶಿಕ್ಷೆ ಏಕೆ ಎಂದು ಪತ್ರಿಕಾ ವರದಿಗಳು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದ್ದವು.
ಇದರಿಂದಾಗಿ ಹಿರಿಯ ಅಧಿಕಾರಿಗಳು ಚಾಮರಾಜನಗರ ಪೊಲೀಸ್ ಅಧೀಕ್ಷಕರಿಗೆ ಮೊದಲು ತಪ್ಪೆಸಗಿದ್ದರೆನ್ನಲಾದ ಪೊಲೀಸರನ್ನೂ ಅಮಾನತು ಮಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಈಗ ಚಾಮರಾಜನಗರ ಪೊಲೀಸ್ ಅಧೀಕ್ಷಕರು ಲಂಚ ಆರೋಪದಡಿ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.







