ಗಡಿದಾಟಿ ಬರುವ ಪಾಕ್‌ನ ಮಿಲಿಟರಿ ಡ್ರೋನ್ ಹೊಡೆದುರುಳಿಸುತ್ತೇವೆ: ಲೆ| ಜ| ಕ್ಲೇರ್
ಚಂಡೀಗಢ, ಸೆ.26: ಗಡಿದಾಟಿ ಬರುವ ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದುರುಳಿಸಲಾಗುವುದು ಎಂದು ಭಾರತೀಯ ಸೇನಾಪಡೆಯ ಹಿರಿಯ ಕಮಾಂಡರ್ ಲೆ| ಜ| ಅಲೋಕ್ ಸಿಂಗ್ ಕ್ಲೇರ್ ಹೇಳಿದ್ದಾರೆ.
ಪಾಕಿಸ್ತಾನದ ಡ್ರೋನ್ ವಿಮಾನಗಳು ಗಡಿದಾಟಿ ಒಳಬಂದು ಪಂಜಾಬ್ ಪ್ರಾಂತ್ಯದಲ್ಲಿ ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರಗಳನ್ನು ಕೆಳಗೆಸೆದಿವೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂತಹ ಸಾಧನಗಳನ್ನು ಗುರುತಿಸಿ ಹೊಡೆುರುಳಿಸಲು ಭಾರತೀಯ ಸೇನೆ ಸಮರ್ಥವಾಗಿದೆ ಎಂದರು.
ಹಿಸಾರ್ ಸೇನಾನೆಲೆಯಲ್ಲಿ ‘ಕೃತಕ ಬುದ್ಧಿಶಕ್ತಿ’ ವಿಷಯದ ಬಗ್ಗೆ ಆಯೋಜಿಸಲಾಗಿದ್ದ ವಿಚಾರ ಸಂಕಿರಣದ ನೇಪಥ್ಯದಲ್ಲಿ ಅವರು ಸುದ್ಧಿಗಾರರ ಜೊತೆ ಮಾತನಾಡಿದರು. ಪಾಕಿಸ್ತಾನದ ಡ್ರೋನ್ ಕುರಿತ ಸುದ್ಧಿಯ ಬಗ್ಗೆ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ. ಈ ವಿಚಾರ ಸಂಕಿರಣದಲ್ಲಿ ಬಳಸಲಾಗಿರುವ ಡ್ರೋನ್‌ಗಳನ್ನು ನೀವು ಗಮನಿಸಿರಬಹುದು. ಇವು ಅತ್ಯಂತ ಪುಟ್ಟ ಡ್ರೋನ್‌ಗಳು. ಪಾಕ್‌ನಿಂದ ಗಡಿದಾಟಿ ಬಂದಿವೆ ಎಂದು ಹೇಳಲಾಗಿರುವ ಡ್ರೋನ್‌ಗಳೂ ಗಾತ್ರದಲ್ಲಿ ಅತೀ ಚಿಕ್ಕದಾಗಿವೆ. ಅವುಗಳ ಸಾಮರ್ಥ್ಯವೂ ಕಡಿಮೆಯಾಗಿದೆ. ಆದ್ದರಿಂದ ಆತಂಕಕ್ಕೆ ಕಾರಣವಿಲ್ಲ ಎಂದವರು ಹೇಳಿದ್ದಾರೆ. ದೇಶದ ರಕ್ಷಣಾ ಪಡೆಗಳ ಕದನ ಸಾಮರ್ಥ್ಯವನ್ನು ವರ್ಧಿಸುವ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ಉಪಯುಕ್ತವಾಗಿದೆ ಎಂದು ಕ್ಲೇರ್ ಹೇಳಿದರು.
ದೇಶದ ರಕ್ಷಣಾ ಪಡೆಗಳಲ್ಲಿ ಏರ್‌ಇಂಡಿಯಾ ವಿಮಾನಗಳನ್ನು ಬಳಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮಾಹಿತಿ ಸಂಗ್ರಹಿಸುವುದು, ಗುಪ್ತ ಮಾಹಿತಿ ಸಂಗ್ರಹಿಸುವುದು ಮುಂತಾದ ಕಾರ್ಯಕ್ಕೆ ಏರ್‌ಇಂಡಿಯಾ ವಿಮಾನವನ್ನು ಬಳಸುವ ಸಾಧ್ಯತೆಯಿದೆ. ಏರ್‌ಇಂಡಿಯಾವನ್ನು ಪ್ರಪ್ರಥಮ ಬಾರಿಗೆ ರಕ್ಷಣಾ ಪಡೆಗಳಲ್ಲಿ ರಚನಾತ್ಮಕ ಕಾರ್ಯಗಳಿಗೆ ಬಳಸಬಹುದು ಎಂದರು.





