ಪಿಎಂಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ ಗ್ರಾಹಕರು

ಮುಂಬೈ, ಸೆ.26: ಬ್ಯಾಂಕಿನಲ್ಲಿ ಗ್ರಾಹಕರು ಠೇವಣಿ ಇರಿಸಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಪಂಜಾಬ್ ಮತ್ತು ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರು ಹಾಗೂ ನಿರ್ದೇಶಕರ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರ ನಿಯೋಗ ಸಯಾನ್ ಪೊಲೀಸ್ ಠಾಣೆಗೆ ತೆರಳಿ ಬ್ಯಾಂಕ್‌ನ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದೆ ಎಂದವರು ಹೇಳಿದ್ದಾರೆ.ದೂರಿನಲ್ಲಿ ಹೆಸರು ಉಲ್ಲೇಖಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅವರ ಪಾಸ್‌ಪೋರ್ಟ್ ಅನ್ನು ವಶಕ್ಕೆ ಪಡೆದುಕೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
ದೂರನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿ ಹೇಳಿದ್ದಾರೆ. ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಬ್ಯಾಂಕ್‌ನ ಕಾರ್ಯಾಚರಣೆಗೆ ಆರ್‌ಬಿಐ ಸೋಮವಾರ ನಿರ್ಬಂಧ ವಿಧಿಸಿತ್ತು. ಮುಂದಿನ ಆರು ತಿಂಗಳಿನವರೆಗೆ ನಿರ್ಬಂಧ ಮುಂದುವರಿಯಲಿದೆ. ಬ್ಯಾಂಕ್ ಯಾವುದೇ ಹೊಸ ಸಾಲ ನೀಡುವಂತಿಲ್ಲ ಹಾಗೂ ಖಾತೆಯಿಂದ ಗರಿಷ್ಟ 1000 ರೂ. ಮೊತ್ತ ಹಿಂಪಡೆಯಬಹುದಾಗಿದೆ ಎಂದು ಆರ್‌ಬಿಐ ಸೂಚಿಸಿದೆ.





