ನೆಸ್ಲೆ, ಅಂಗ ಸಂಸ್ಥೆ ಶಿಶುಗಳ ಮೇಲೆ ನಡೆಸಿದ ಸಂಶೋಧನೆ ರದ್ದುಗೊಳಿಸಲು ವೈದ್ಯಕೀಯ ಮಂಡಳಿ ಸೂಚನೆ

ಹೊಸದಿಲ್ಲಿ, ಸೆ. 26: ವಿವಿಧ ಶ್ರೇಣಿಯ ಶಿಶು ಆಹಾರಗಳನ್ನು ಉತ್ಪಾದಿಸುವ ನೆಸ್ಲೆ ಹಾಗೂ ಅದರ ಅಂಗ ಸಂಸ್ಥೆ ನೆಸ್ಟೆಕ್ ನಿಧಿ ಹೂಡಿದ ಶಿಶು ಆಹಾರದ ಮೇಲಿನ ಎರಡು ವೈದ್ಯಕೀಯ ಪ್ರಯೋಗಗಳ ಮೇಲೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ದಂಡ ವಿಧಿಸುವಂತೆ ಶಿಫಾರಸು ಮಾಡಿದೆ.
‘ಬ್ರೆಸ್ಟ್‌ಫೀಡಿಂಗ್ ಪ್ರಮೋಷನ್ ನೆಟ್‌ವರ್ಕ್ ಆಫ್ ಇಂಡಿಯಾ’ (ಬಿಪಿಎನ್‌ಐ)ದ ಶಿಶುತಜ್ಞ ಡಾ. ಅರುಣ್ ಗುಪ್ತಾ ಪ್ರಶ್ನೆ ಎತ್ತಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ಬದಲಿ ಶಿಶು ಹಾಲು (ಐಎಂಎಸ್) ಕಾಯ್ದೆ ಅನುಸರಣೆ ಹಾಗೂ ಅನುಸರಣೆ ಮಾಡದೇ ಇರುವುದನ್ನು ಪರಿಶೀಲಿಸಲು ಸರಕಾರ ಬಿಪಿಎನ್‌ಐಗೆ ಸೂಚಿಸಿತ್ತು. ನೆಸ್ಲೆ ಹಾಗೂ ಅದರ ಅಂಗ ಸಂಸ್ಥೆಯಾದ ನೆಸ್ಟೆಕ್ ಐಎಂಎಸ್ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಎಂದು ಗುಪ್ತಾ ಐಸಿಎಂಆರ್‌ಗೆ ಪತ್ರ ಬರೆದಿದ್ದರು. ನೆಸ್ಲೆ ಪ್ರಾಯೋಜಿಸಿದ ಒಂದು ಪ್ರಯೋಗ ಅವಧಿಪೂರ್ವ ಶಿಶುಗಳ ಬೆಳವಣಿಗೆಗೆ ಸಂಬಂಧಿಸಿದ್ದು. ಇದಕ್ಕೆ ಸ್ವತಂತ್ರ ನೀತಿ ಸಮಿತಿ ಸ್ವಷ್ಟವಾಗಿ ಅನುಮತಿ ನಿರಾಕರಿಸಿದೆ. ಇನ್ನೆರೆಡು ಪ್ರಯೋಗವನ್ನು ನೆಸ್ಲೆಯ ಅಂಗ ಸಂಸ್ಥೆ ನೆಸ್ಟೆಕ್ ಪ್ರಾಯೋಜಿಸಿದೆ.
ಪೌಷ್ಠಿಕ ಆಹಾರ ಸೇವಿಸುವ ಹಾಗೂ ಪೌಷ್ಠಿಕ ಆಹಾರ ಸೇವಿಸದ ತಾಯಿಯ ಹಾಲಿನ ಸಂಯೋಜನೆ ಕುರಿತು, ಮಕ್ಕಳಿಗೆ ಆಹಾರ ನೀಡುವ ಅಭ್ಯಾಸ ಹಾಗೂ ಪೌಷ್ಠಿಕ ಆಹಾರದ ಕುರಿತು ಈ ಅಧ್ಯಯನ ಇದೆ. ಬೆಂಗಳೂರಿನ ಕ್ಲೌಡ್‌ನೈನ್ ಆಸ್ಪತ್ರೆ, ಕೋಲ್ಕತ್ತಾದ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್, ಬೆಂಗಳೂರಿನ ಮಣಿಪಾಲ ಆಸ್ಪತ್ರೆ, ಹೊಸದಿಲ್ಲಿಯ ಶ್ರೀ ಗಂಗಾರಾಮ್ ಆಸ್ಪತ್ರೆ, ಕೋಲ್ಕತ್ತಾದ ಕಲ್ಕತ್ತಾ ಮೆಡಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸೇರಿದಂತೆ ಐದು ಪ್ರಮುಖ ಆಸ್ಪತ್ರೆಗಳಲ್ಲಿ ನೆಸ್ಲೆ ಅಧ್ಯಯನ ನಡೆಸಿದೆ. ನೆಸ್ಟೆಕ್ ಅಧ್ಯಯನದಲ್ಲಿ ಮೈಸೂರು, ಪುಣೆ, ಬೆಂಗಳೂರು, ದಿಲ್ಲಿ, ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದ ಸಂಸ್ಥೆಗಳು ಭಾಗವಹಿಸಿವೆ.
ಈಗ ಐಸಿಎಂಆರ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ ಹಾಗೂ ಆ ಪ್ರಯೋಗಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತದ ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿಗೆ ಸೂಚಿಸಿದೆ.







