ಭಾರತದ 389 ಜಿಲ್ಲೆಗಳಲ್ಲಿ ನೂರಕ್ಕೂ ಅಧಿಕ ಮಕ್ಕಳ ದೌರ್ಜನ್ಯ ಪ್ರಕರಣಗಳು ಬಾಕಿ

ಹೊಸದಿಲ್ಲಿ,ಸೆ.27: ದೇಶದ 389 ಜಿಲ್ಲೆಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ನೂರಕ್ಕೂ ಅಧಿಕ ಪ್ರಕರಣಗಳು ವಿಚಾರಣೆಗೆ ಬಾಕಿಯುಳಿದಿವೆ ಮತ್ತು ಕಾನೂನು ಸಚಿವಾಲಯದ ಪ್ರಸ್ತಾವನೆಯಂತೆ, ಇಂತಹ ಪ್ರತಿಯೊಂದು ಜಿಲ್ಲೆಯಲ್ಲೂ ವಿಶೇಷ ತ್ವರಿತ ವಿಚಾರಣೆ ನ್ಯಾಯಾಲಯಗಳನ್ನು ರಚಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಕಾನೂನು ಸಚಿವಾಲಯದ, ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯಡಿ ಬಾಕಿಯಿರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ತ್ವರಿತ ವಿಚಾರಣೆಯ ವಿಶೇಷ ನ್ಯಾಯಾಲಯ ನಿರ್ಮಾಣ ಯೋಜನೆ ಹೆಸರಿನ ದಾಖಲೆಯಲ್ಲಿ ಮಾಹಿತಿ ನೀಡಲಾಗಿದ್ದು, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಇಂತಹ ಪ್ರತಿಯೊಂದು ಜಿಲ್ಲೆಯಲ್ಲೂ ಪೋಕ್ಸೊ ನ್ಯಾಯಾಲಯಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಲಾಗಿದೆ.
ಬಾಕಿಯಿರುವ ಪೋಕ್ಸೊ ಪ್ರಕರಣಗಳ ಆಧಾರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉಚ್ಚ ನ್ಯಾಯಾಲಯಗಳ ಜೊತೆ ಸಮಾಲೋಚನೆ ನಡೆಸಿ, ಯೋಜನೆಯಲ್ಲಿ ನಿಗದಿಪಡಿಸಲಾಗಿರುವ ತ್ವರಿತ ವಿಚಾರಣೆಯ ವಿಶೇಷ ನ್ಯಾಯಾಲಯಗಳ ಒಟ್ಟು ಸಂಖ್ಯೆಗಳ ಮಿತಿಯಲ್ಲೇ ಹೆಚ್ಚಿನ ಪೋಕ್ಸೊ ನ್ಯಾಯಾಲಯಗಳ ನಿರ್ಮಾಣದ ಅಗತ್ಯವಿದೆಯೇ ಎನ್ನುವುದನ್ನು ನಿರ್ಧರಿಸಬಹುದಾಗಿದೆ. ದೇಶಾದ್ಯಂತ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆದಿರುವ ಒಟ್ಟು 1.66 ಲಕ್ಷ ಅಪರಾಧಗಳು ವಿಚಾರಣೆಗೆ ಬಾಕಿಯುಳಿದಿದ್ದು ಅವುಗಳ ಶೀಘ್ರ ವಿಚಾರಣೆಗಾಗಿ 1,023 ತ್ವರಿತ ವಿಚಾರಣೆಯ ವಿಶೇಷ ನ್ಯಾಯಾಲಯಗಳನ್ನು ರಚಿಸಲು ಕೇಂದ್ರ ಸರಕಾರ ಪ್ರಸ್ತಾವನೆ ಸಲ್ಲಿಸಿದೆ.







