ವಿಶ್ವಸಂಸ್ಥೆ ಪ್ರಧಾನ ಕಚೇರಿ ಹೊರಗೆ ಮೋದಿ ವಿರುದ್ಧ ಪ್ರತಿಭಟನೆ
‘ಕೋಲೀಶನ್ ಅಗೆನ್‌ಸ್ಟ್ ಫ್ಯಾಶಿಸಮ್ ಇನ್ ಇಂಡಿಯ’ ಘೋಷಣೆ

ನ್ಯೂಯಾರ್ಕ್, ಸೆ. 27: ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಮಹಾಸಭೆಯ ವಾರ್ಷಿಕ ಅಧಿವೇಶನಕ್ಕೆ ಬರುವುದನ್ನು ವಿರೋಧಿಸಿ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಶುಕ್ರವಾರ ಪ್ರತಿಭಟನೆ ನಡೆಸುವುದಾಗಿ ಸಾವಿರಾರು ಭಾರತೀಯ ಅಮೆರಿಕನ್ನರು ಹೇಳಿದ್ದಾರೆ.
‘‘ಮೋದಿ ಸರಕಾರವು ಭಾರತದಲ್ಲಿ ಮುಸ್ಲಿಮರು ಮತ್ತು ದಲಿತರ ವಿರುದ್ಧ ದ್ವೇಷ ಮತ್ತು ಹಿಂಸೆಯ ನೀತಿಯನ್ನು ಅನುಸರಿಸುತ್ತಿದೆ ಹಾಗೂ 70 ಲಕ್ಷ ಕಾಶ್ಮೀರಿಗಳ ಹಕ್ಕುಗಳನ್ನು ದಮನಿಸುತ್ತಿದೆ’’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಘಟನೆ ‘ಕೋಲೀಶನ್ ಅಗೆನ್‌ಸ್ಟ್ ಫ್ಯಾಶಿಸಮ್ ಇನ್ ಇಂಡಿಯ (ಸಿಎಎಫ್‌ಐ)’ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಭಾರತದಲ್ಲಿ ಚಾಲ್ತಿಯಲ್ಲಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ಬಗ್ಗೆ ಪ್ರಸ್ತಾಪಿಸಿರುವ ಹೇಳಿಕೆಯು, ಮೋದಿ ಸರಕಾರವು ಅಸ್ಸಾಮ್‌ನಲ್ಲಿ 20 ಲಕ್ಷ ಜನರನ್ನು ದೇಶವಿಹೀನರನ್ನಾಗಿ ಮಾಡಿದೆ ಎಂದು ಅದು ಹೇಳಿದೆ.
ಮೋದಿ ಸರಕಾರವನ್ನು ‘ಬಡವರ ವಿರೋಧಿ’ ಮತ್ತು ‘ಅಲ್ಪಸಂಖ್ಯಾತರ ವಿರೋಧಿ’ ಎಂಬುದಾಗಿ ಬಣ್ಣಿಸಿರುವ ಸಿಎಎಫ್‌ಐ, ಎಲ್ಲ ರೀತಿಯ ಭಿನ್ನಮತವನ್ನು ಮತ್ತು ಅದರ ದ್ವೇಷ ರಾಜಕಾರಣವನ್ನು ಪ್ರಶ್ನಿಸುವವರನ್ನು ಹೇಗೆ ದಮನಿಸಲಾಗಿದೆ ಎಂಬುದರತ್ತ ಅದು ಗಮನ ಸೆಳೆದಿದೆ.
‘‘ಮೋದಿ ಸರಕಾರದ ಆರ್ಥಿಕ ನೀತಿಗಳು ಜನರ ಬಡತನವನ್ನು ಹೆಚ್ಚಿಸಿವೆ ಹಾಗೂ ಈ ನೀತಿಗಳಿಂದಾಗಿ ನಿರುದ್ಯೋಗ ದರವು ಅರ್ಧ ಶತಮಾನದಲ್ಲೇ ಗರಿಷ್ಠವಾಗಿದೆ’’ ಎಂದು ಹೇಳಿಕೆ ತಿಳಿಸಿದೆ.
ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ರಟ್ಗರ್ಸ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಫೆಸರ್ ಹಾಗೂ ಇತಿಹಾಸ ತಜ್ಞೆ ಆಡ್ರೇ ಟ್ರಶ್ಕ್ ಘೋಷಿಸಿದ್ದಾರೆ.
‘‘ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಮುದಾಯಗಳು ಮತ್ತು ವ್ಯಕ್ತಿಗಳು, ಮೋದಿಯ ‘ದ್ವೇಷ ಕಾರುವ ಉಗ್ರ ರಾಷ್ಟ್ರೀಯತೆ: ಹಿಂದುತ್ವ’ದ ವಿನಾಶಕಾರಿ ಫಲಿತಾಂಶಗಳನ್ನು ವೈಯಕ್ತಿಕವಾಗಿ ಅನುಭವಿಸಿದವರಾಗಿದ್ದಾರೆ’’ ಎಂದು ಟ್ರಶ್ಕ್ ಹೇಳಿದರು.
I am proud to be joining a diverse group of Indian Americans in New York City tomorrow that are determined to draw attention to the #ModiSarkar's record on human rights and demand justice for all Indians. Press release: https://t.co/5bW8lP0l57 #HumanRights #Hindutva #India
— Audrey Truschke (@AudreyTruschke) September 26, 2019







