ಇರಾನ್ ಬಂದರಿನಿಂದ ಹೊರಟ ಬ್ರಿಟನ್ ತೈಲ ಟ್ಯಾಂಕರ್

ಸ್ಟಾಕ್‌ಹೋಮ್ (ಸ್ವೀಡನ್), ಸೆ. 27: ಇರಾನ್‌ನ ಬಂದರ್ ಅಬ್ಬಾಸ್ ಬಂದರಿನಲ್ಲಿ ಎರಡು ತಿಂಗಳಿಗೂ ಹೆಚ್ಚು ಅವಧಿಯಲ್ಲಿ ತಡೆಹಿಡಿಯಲಾಗಿದ್ದ ಬ್ರಿಟಿಶ್ ತೈಲ ಟ್ಯಾಂಕರ್ ‘ಸ್ಟೆನಾ ಇಂಪೇರೊ’ ಶುಕ್ರವಾರ ಹೊರಟಿದೆ ಎಂದು ಇರಾನ್ ನೌಕಾಯಾನ ಸಂಸ್ಥೆ ತಿಳಿಸಿದೆ.
ಸಿರಿಯಕ್ಕೆ ತೈಲ ಸಾಗಿಸುತ್ತಿದ್ದ ಆರೋಪದಲ್ಲಿ ಇರಾನ್‌ನ ತೈಲವಾಹಕ ಟ್ಯಾಂಕರೊಂದನ್ನು ಬ್ರಿಟನ್ ಆಡಳಿತದ ಜಿಬ್ರಾಲ್ಟರ್ ವಶಕ್ಕೆ ತೆಗೆದುಕೊಂಡಿರುವುದಕ್ಕೆ ಪ್ರತಿಯಾಗಿ ಸ್ಟೆನಾ ಇಂಪೇರೊವನ್ನು ಇರಾನ್ ವಶಕ್ಕೆ ಪಡೆದುಕೊಂಡಿತ್ತು ಎಂಬುದಾಗಿ ವ್ಯಾಪಕವಾಗಿ ಭಾವಿಸಲಾಗಿದೆ.
ಇರಾನ್‌ನ ತೈಲ ಟ್ಯಾಂಕರನ್ನು ಕಳೆದ ತಿಂಗಳು ಜಿಬ್ರಾಲ್ಟರ್‌ನಿಂದ ಬಿಡಲಾಗಿತ್ತು.
‘‘ಸ್ಟೆನಾ ಇಂಪೇರೊ ಪರ್ಸಿಯನ್ ಕೊಲ್ಲಿಯ ಅಂತರ್‌ರಾಷ್ಟ್ರೀಯ ಜಲಪ್ರದೇಶದತ್ತ ಇಂದು ಬೆಳಗ್ಗೆ ಹೊರಟಿದೆ’’ ಎಂದು ಹೊರ್ಮೊಝ್ಗನ್ ರಾಜ್ಯದ ನೌಕಾಯಾನ ಸಂಸ್ಥೆ ಶುಕ್ರವಾರ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
Next Story





