ರೈಲು ನಿಲ್ದಾಣದಲ್ಲಿ ಕಳವು: ಇಬ್ಬರು ಆರೋಪಿಗಳ ಬಂಧನ

ಮಂಗಳೂರು, ಸೆ.27: ರೈಲು ಪ್ರಯಾಣಿಕರ ಮೊಬೈಲ್ ಮತ್ತು ಹ್ಯಾಂಡ್ ಬ್ಯಾಗ್‌ಗಳನ್ನು ಕಳವು ಮಾಡಿದ ಆರೋಪದಲ್ಲಿ ಇಬ್ಬರನ್ನು ಕೊಂಕಣ ರೈಲ್ವೆ ನಿಗಮದ ರೈಲ್ವೆ ರಕ್ಷಣಾ ಪಡೆ ಬಂಧಿಸಿದೆ.
ಕೇರಳದ ಕಣ್ಣೂರ್ ನಿವಾಸಿಗಳಾದ ಶಫೀಕ್ ಮತ್ತು ಸಿ.ಪಿ. ಸಿಯಾದ್ ಬಂಧಿತ ಆರೋಪಿಗಳು.
ಆರೋಪಿಗಳಿಂದ ಮೂರು ಮೊಬೈಲ್ , 10,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ವಿವರ: ತಿರುವನಂತಪುರಂ- ಹಝ್ರತ್ ನಿಝಾಮುದ್ದೀನ್ ಎಕ್ಸ್‌ಪ್ರೆಸ್ (ನಂ. 22655) ರೈಲಿನಲ್ಲಿ ಪ್ರಯಾಣಿಕರ ಮೊಬೈಲ್ ಮತ್ತು ಇತರ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಲಾಗುತ್ತಿದೆ ಎಂದು ಬುಧವಾರ ತಿರುವನಂತಪುರಂನಿಂದ ಕೋಟಕ್ಕೆ ‘ಬಿ2’ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಅರ್ಪಿತ್ ಅಲೆಗ್ಸಾಂಡರ್, ರೈಲು ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ತಲುಪಿದಾಗ ಆರ್‌ಪಿಎಫ್ ಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಟಿಟಿಇ (ಪ್ರಯಾಣ ಟಿಕೆಟ್ ಪರಿವೀಕ್ಷಕ) ಗಜಾನನ ಬಿ. ಭಟ್ ಅವರು ಆರ್‌ಪಿಎಫ್ ಎಎಸ್ಸೈ ಕೆ.ಎ.ಕ್ಯೂಟ್ ಮತ್ತು ಕಾನ್ಸ್‌ಟೇಬಲ್ ಕರುಣಾಕರ್ ಬಳಿ ದೂರು ದಾಖಲಿಸಿದ್ದರು.
ರೈಲಿನ ಬೋಗಿಯಲ್ಲಿದ್ದ ಇಬ್ಬರು ಶಂಕಿತ ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿರಬೇಕೆಂದು ಆರ್‌ಪಿಎಫ್ ಸಿಬ್ಬಂದಿ ಸಂಶಯ ವ್ಯಕ್ತಪಡಿಸಿ, ವಿಚಾರಣೆ ನಡೆಸಿ ಈ ವೇಳೆ ಕಳವಾಗಿದ್ದ ಮೊಬೈಲ್ ಪತ್ತೆಯಾಗಿದೆ. ಆರೋಪಿ ಶಫೀಕ್‌ನನ್ನು ಮಂಗಳೂರಿನ ಪೊಲೀಸರಿಗೆ ಹಾಗೂ ಸಿ.ಪಿ. ಸಿಯಾದ್‌ನನ್ನು ಮಣಿಪಾಲ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







