ಔರಾದ್ಕರ್ ವರದಿ ಜಾರಿ ಬಗ್ಗೆ ವಾರದೊಳಗೆ ಸುತ್ತೋಲೆ: ಬೊಮ್ಮಾಯಿ
'ರಾಜ್ಯ ಪೊಲೀಸರ ವೇತನ ಶೀಘ್ರ ಪರಿಷ್ಕರಣೆ'

ಉಡುಪಿ, ಸೆ.27: ರಾಜ್ಯದ ಪೊಲೀಸ್ ಸಿಬ್ಬಂದಿಗಳ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಔರಾದ್ಕರ್ ವರದಿಯನ್ನು ಖಂಡಿತವಾಗಿಯೂ ಜಾರಿ ಮಾಡಲಾ ಗುವುದು. ಈ ಕುರಿತು ಸ್ಪಷ್ಟವಾದ ಸುತ್ತೋಲೆಯನ್ನು ಒಂದು ವಾರದೊಳಗೆ ಹೊರಡಿಸಲಾಗುವುದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಇಂದು ಉಡುಪಿಗೆ ಆಗಮಿಸಿದ ಅವರು ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.
ಔರಾದ್ಕರ್ ವರದಿಗೆ ಈಗಾಗಲೇ ಸಚಿವ ಸಂಪುಟ ಎರಡು ಹಂತದಲ್ಲಿ ಒಪ್ಪಿಗೆ ನೀಡಿದೆ. ಇದರಲ್ಲಿ ಕಾನ್‌ಸ್ಟೇಬಲ್, ಹೆಡ್‌ಕಾನ್‌ಸ್ಟೇಬಲ್, ಎಎಸ್ಸೈ, ಪಿಎಸ್ಸೈ, ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಸೇರಿದ್ದರು. ಆದರೆ ಬಂಧಿಖಾನೆ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಕೈಬಿಡಲಾಗಿತ್ತು. ನಮ್ಮ ಸರಕಾರ ಬಂದ ಬಳಿಕ ಕ್ಯಾಬಿನೆಟ್ನಲ್ಲಿ ಅದಕ್ಕೂ ಒಪ್ಪಿಗೆ ನೀಡಲಾಗಿದೆ. ಇವು ಎರಡನ್ನು ಸೇರಿಸಿ ಆರ್ಥಿಕ ಇಲಾಖೆಯಿಂದ ಕೆಲವೊಂದು ಸ್ಪಷ್ಟನೆ ಕೇಳಿಕೊಂಡು ಇನ್ನೊಂದು ವಾರದೊಳಗೆ ಸ್ಪಷ್ಟವಾದ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಇಡೀ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಆ ಎಲ್ಲಾ ಮಾಹಿತಿ ಗಳು ಸಿಬಿಐಗೆ ಇರುತ್ತದೆ. ಈ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಗೃಹ ಸಚಿವನಾಗಿ ಊಹಾಪೋಹಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಎಸ್‌ಐಟಿ ಮಾಡಿರುವ ತನಿಖೆಯ ಸಂಪೂರ್ಣ ವಿವರ ಸಿಬಿಐಗೆ ನೀಡಿದ್ದೇವೆ. ಅನುಮತಿ ಇಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಮಾತುಕತೆಯ ಕದ್ದಾಲಿಕೆ ಸರಿಯಲ್ಲ ಎಂದು ಹೇಳಿದರು.
ಪ್ರಭಾವ ಬಳಸಿ ಉಪ ಚುನಾವಣೆಯನ್ನು ಮುಂದೂಡಲಾಗಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಉತ್ತರಿಸಿದ ಗೃಹ ಸಚಿವ ಬೊಮ್ಮಾಯಿ, ಕುಮಾರ ಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.







