ಸರಕಾರದ ಷಡ್ಯಂತ್ರಕ್ಕೆ ಕಾರ್ಪೊರೇಶನ್ ಬ್ಯಾಂಕ್ ಬಲಿ: ಡಾ.ಪಿ.ವಿ.ಭಂಡಾರಿ
ಬ್ಯಾಂಕ್ ವಿಲೀನಿಕರಣದ ಏಕಪಕ್ಷೀಯ ನಿರ್ಧಾರಕ್ಕೆ ವಿರೋಧ

ಉಡುಪಿ, ಸೆ.27: ಬ್ಯಾಂಕ್ ವಿಲೀನಿಕರಣದಿಂದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಾರ್ಪೊರೇಶನ್ ಬ್ಯಾಂಕಿನ ಹೆಸರೇ ಇಲ್ಲವಾಗುತ್ತದೆ. ನಮ್ಮ ನಾಡಿನ ಹೆಮ್ಮೆ ಹಾಗೂ ಪ್ರೀತಿಯಿಂದ ಬೆಳೆಸಿದ ಬ್ಯಾಂಕಿಗೆ ಇದರಿಂದ ಧಕ್ಕೆ ಉಂಟಾಗಿದೆ. ಕೆಲವೊಂದು ಷಡ್ಯಂತ್ರಕ್ಕೆ ಈ ಬ್ಯಾಂಕ್ ಬಲಿಯಾಗುತ್ತಿದೆ ಎಂದು ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಆರೋಪಿಸಿದ್ದಾರೆ.
ಕಾರ್ಪೊರೇಶನ್ ಬ್ಯಾಂಕ್ ಉಡುಪಿ ಸಂಸ್ಥಾಪಕರ ಶಾಖೆಯ ಆವರಣದಲ್ಲಿ ರುವ ಹಾಜಿ ಅಬ್ದುಲ್ಲಾ ಮೆಮೋರಿಯಲ್ ಹಾಲ್‌ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಜಿ ಅಬ್ದುಲ್ಲಾ ದಾನವಾಗಿ ನೀಡಿರುವ ಸರಕಾರಿ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಿದ ಸರಕಾರ ಕ್ರಮದ ವಿರುದ್ಧ ನಡೆಸಿದ ಮಾದರಿಯಲ್ಲೇ ಮುಂದೆ ಬ್ಯಾಂಕ್ ವಿಲೀನಿಕರಣದ ವಿರುದ್ಧ ಸಹ ಹೊೀರಾಟ ನಡೆಸಲಾಗುವುದು ಎಂದರು.
ಟ್ರಸ್ಟಿ ಹಾಗೂ ಹಾಜಿ ಅಬ್ದುಲ್ಲ ಅವರ ಸಂಬಂಧಿ ಸೈಯ್ಯದ್ ಸಿರಾಜ್ ಅಹ್ಮದ್ ಮಾತನಾಡಿ, ಬೇರೆ ದೇಶಗಳಲ್ಲಿ ಬ್ಯಾಂಕ್ ವಿಲೀನ ಮಾಡಿದ್ದಾ ರೆಂದು ನಮ್ಮ ದೇಶದಲ್ಲಿ ಲಾಭದಲ್ಲಿರುವ ಬ್ಯಾಂಕ್‌ಗಳನ್ನು ವಿಲೀನ ಮಾಡುವುದಕ್ಕೆ ಅರ್ಥ ಇಲ್ಲ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹುಟ್ಟಿರುವ ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್‌ಗಳನ್ನು ವಿಲೀನ ಮಾಡುವುದ ರಿಂದ ಬ್ಯಾಂಕ್‌ಗಳ ತವರೂರು ಎಂಬ ಖ್ಯಾತಿಯೇ ಅಳಿಸಿ ಹೋಗಲಿದೆ. ಶತಮಾನದ ಬ್ಯಾಂಕ್‌ನ್ನು ಉಳಿಸಲು ನಮ್ಮ ಕುಟುಂಬ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿ ಸಂಘಟನೆಯ ಅಧ್ಯಕ್ಷ ಸುಧೀಂದ್ರ ಮಾತನಾಡಿ, ವಿಲೀನದಿಂದಾಗಿ 130 ವರ್ಷಗಳ ಇತಿಹಾಸ ಹೊಂದಿರುವ ಕಾರ್ಪೊರೇಶನ್ ಬ್ಯಾಂಕ್ ಇತಿಹಾಸ ಪುಟದಿಂದಲೇ ಅಳಿಸಿ ಹೋಗಲಿದೆ. ಇದರ ವಿರುದ್ಧ ಹೋರಾಟ ಅಗತ್ಯವಾಗಿ ಮಾಡಬೇಕಾಗಿದೆ. ಇದು ನಮಗಾಗಿ ಮಾಡುವ ಹೋರಾಟ ಅಲ್ಲ. ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಹಾಗೂ ದೇಶದ ಆರ್ಥಿಕತೆಯ ಉಳಿವಿಗಾಗಿ ಮಾಡುವ ಹೋರಾಟ ಆಗಿದೆ ಎಂದರು.
ಈಗ ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನೀಕರಣದಿಂದ ಅನೇಕ ಬ್ಯಾಂಕ್ ಶಾಖೆ ಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ತನ್ನ ಸಹ ವರ್ತಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯಲ್ಲಿ ದೇಶದ 6950 ಶಾಖೆಗಳನ್ನು ಮುಚ್ಚಿ ಹಾಕಿದೆ. ಬ್ಯಾಂಕ್ ವಿಲೀನಿಕರಣದಿಂದ ದೊಡ್ಡ ಮಟ್ಟದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಲಿದೆ. ಮೊದಲು ಬ್ಯಾಂಕ್‌ಗಳಿಗೆ 20000 ಹುದ್ದೆಗಳಿಗೆ ನೇಮಕಾತಿ ಮಾಡುತಿದ್ದರೆ, ಈ ವರ್ಷ ನಡೆದ ನೇಮಕಾತಿ ಸಂಖ್ಯೆ ಕೇವಲ 4500 ಮಾತ್ರ ಎಂದು ಅವರು ತಿಳಿಸಿದರು.
ಇಂದು ದೇಶದಲ್ಲಿ ತಲೆದೋರಿರುವ ಆರ್ಥಿಕ ಹಿನ್ನಡೆಯಿಂದ ಆಟೋ ಮೊಬೈಲ್ ಸೇರಿದಂತೆ ಹಲವು ಉದ್ಯಮಗಳು ಸಂಕಷ್ಟಕ್ಕೆ ಒಳಾಗಿವೆ. ಜನರ ಸಂಬಳ ಸೇರಿದಂತೆ ಆದಾಯದಲ್ಲಿ ಯಾವುದೇ ಏರಿಕೆ ಕಂಡುಬಾರದಿದ್ದರೂ ಜಿಎಸ್‌ಟಿ ಸೇರಿದಂತೆ ವಿವಿಧ ತೆರಿಗೆಗಳಿಂದ ಅವರ ನಿಜವಾದ ಆದಾಯ ಕಡಿಮೆಯಾಗಿದೆ ಎಂದು ಅವರು ದೂರಿದರು.
ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಮಾತನಾಡಿ, ಸಾರ್ವಜನಿಕ ಬ್ಯಾಂಕ್‌ಗಳು ನಷ್ಟದಲ್ಲಿವೆ ಎಂಬು ದಾಗಿ ಸುಳ್ಳು ಮಾಹಿತಿಗಳು ನೀಡಲಾಗುತ್ತಿದೆ. ಉತ್ತರ ಭಾರತದ ಬ್ಯಾಂಕ್‌ಗಳ ಬಂಡವಾಳ ದಕ್ಷಿಣ ಭಾರತದ ಬ್ಯಾಂಕ್‌ಗಳಿಗೆ ಹರಿದು ಬರಲಿ ಎಂಬ ಉದ್ದೇಶ ದಿಂದ ಬ್ಯಾಂಕ್‌ಗಳ ವಿಲೀನ ಮಾಡಲಾಗಿದೆ ಎಂಬ ವಿತ್ತ ಸಚಿವರ ಹೇಳಿಕೆ ಒಪ್ಪುವಂತದಲ್ಲ. ಹಾಗಾದರೆ ದಕ್ಷಿಣ ಭಾರತದ ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್‌ನ್ನು ಯಾಕೆ ವಿಲೀನ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಶನ್ ಬ್ಯಾಂಕ್ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ, ಜಿಲ್ಲಾ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಹೆರಾಲ್ಡ್ ಡಿಸೋಜ, ಹೇಮಂತ್‌ಕಾಂತ್, ಟ್ರಸ್ಟ್‌ನ ಟ್ರಸ್ಟಿ ಯೋಗೀಶ್ ಶೇಟ್ ಉಪಸ್ಥಿತರಿದ್ದರು.







