ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿ: ಈ ರಾಜ್ಯಕ್ಕೆ ಅತ್ಯುನ್ನತ ಗೌರವ

ಹೊಸದಿಲ್ಲಿ,ಸೆ.27: ವಿಶ್ವ ಪ್ರವಾಸೋದ್ಯಮ ದಿನದಂದು ನಡೆದ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿ 2017-18 ಸಮಾರಂಭದಲ್ಲಿ, ಆಂಧ್ರ ಪ್ರದೇಶ ಪ್ರವಾಸೋದ್ಯಮ ವಿಭಾಗದಲ್ಲಿ ಸರ್ವಾಂಗೀಣ ಪ್ರಗತಿ ಸಾಧಿಸಿರುವುದಕ್ಕಾಗಿ ಅತ್ಯುತ್ತಮ ರಾಜ್ಯ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಭಾರತ ತನ್ನ ಉದ್ಯಮ ಪರಿಸರವನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿದೆ, ಈ ಹಿಂದೆ ಕೆಂಪು ಪಟ್ಟಿಯನ್ನು ಎದುರಿಸುತ್ತಿದ್ದ ಪ್ರವಾಸಿಗರು ಇಂದು ಕೆಂಪು ಹಾಸಿನ ಸ್ವಾಗತ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿರುವ ಎಲ್ಲರೂ ತಮ್ಮ ಪರಿಸರದ ಬಗ್ಗೆ ತಿಳಿದುಕೊಳ್ಳಬೇಕು. ಜೊತೆಗೆ ಜವಾಬ್ದಾರಿಯಿಂದ ಕೂಡಿದ ಮತ್ತು ಸಮರ್ಥನೀಯ ಪ್ರವಾಸೋದ್ಯಮ ಸೇವೆಯಲ್ಲಿ ತೊಡಗಬೇಕು ಎಂದು ನಾಯ್ಡು ತಿಳಿಸಿದ್ದಾರೆ. ನಮ್ಮ ದೇಶ ಪ್ರವಾಸಿಗರ ಆಗಮನಕ್ಕೆ ಅನುಕೂಲ ಮತ್ತು ಸುರಕ್ಷಿತವನ್ನಾಗಿ ಮಾಡಲು ಸರಕಾರ ಅನೇಕ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತ ತನ್ನ ಉದ್ಯಮ ಪರಿಸರ, ಸುಗಮ ಉದ್ಯಮ ವಾತಾವರಣ, ಸರ್ವಾಂಗೀಣ ಪ್ರವಾಸ ಮತ್ತು ಪ್ರವಾಸೋದ್ಯಮ ನೀತಿ ಮತ್ತು ಮೂಲಭೂತ ಸೌಕರ್ಯ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಈಗ ಭಾರತಕ್ಕೆ ಆಗಮಿಸಲು ಬಯಸುವವ ಎಲ್ಲರಿಗೂ ಇಲ್ಲಿ ಕೆಂಪು ಪಟ್ಟಿಯಿಲ್ಲ ಕೇವಲ ಕೆಂಪು ಹಾಸಿನ ಸ್ವಾಗತ ಕೋರಲಾಗುತ್ತಿದೆ ಎಂದು ಉಪರಾಷ್ಟ್ರಪತಿ ತಿಳಿಸಿದ್ದಾರೆ. ಈ ವರ್ಷ ವಿವಿಧ ವಿಭಾಗಗಳ ಅಡಿಯಲ್ಲಿ ಒಟ್ಟು 76 ಪ್ರಶಸ್ತಿಗಳನ್ನು ನೀಡಲಾಯಿತು. ಗೋವಾ ಮತ್ತು ಮಧ್ಯಪ್ರದೇಶ ಜಂಟಿಯಾಗಿ ಸಾಹಸ ಪ್ರವಾಸೋದ್ಯಮ ಪ್ರಶಸ್ತಿ ಗೆದ್ದರೆ ಉತ್ತರಾಖಂಡ ಅತ್ಯುತ್ತಮ ಸಿನೆಮಾ ಪ್ರಚಾರಸ್ನೇಹಿ ರಾಜ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮಾಹಿತಿ ತಂತ್ರಜ್ಞಾನದ ಆವಿಷ್ಕಾರಿ ಬಳಕೆಗಾಗಿ ಅತ್ಯುತ್ತಮ ರಾಜ್ಯ ಪ್ರಶಸ್ತಿಯನ್ನು ತೆಲಂಗಾಣ ಗೆದ್ದುಕೊಂಡಿದೆ.







