ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಿತಿ ರಚನೆ:ಕೋಟಾ
ವಿಶ್ವ ಪ್ರವಾಸೋದ್ಯಮ ದಿನಾಚರಣೆ

ಮಂಗಳೂರು, ಸೆ.27:ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಈ ಸಮಿತಿ ಮೂಲಕ ಕರಾವಳಿಯ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ದ.ಕ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ದ.ಕ. ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ನಡೆದ ‘ವಿಶ್ವ ಪ್ರವಾಸೋದ್ಯಮ ದಿನಾಚರಣೆ-2019’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಕೃತಿಕ ಸೌಂದರ್ಯ ಉಪಯೋಗಿಸಿ ರಾಜ್ಯದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶವಿದೆ. ಕರಾವಳಿಯಲ್ಲಿ ದೇವಳ ಪ್ರವಾಸೋದ್ಯಮ ಜನಪ್ರಿಯವಾಗಿದೆ. ಬೀಚ್ ಅಭಿವೃದ್ಧಿ, ಹಿನ್ನೀರಿನಲ್ಲಿ ಬೋಟ್ ಹೌಸ್‌ಗಳ ನಿರ್ಮಾಣ ಮಾಡುವುದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕನಸಾಗಿದೆ. ಜತೆಗೆ ಕರಾವಳಿಯಲ್ಲಿ ದೇವಸ್ಥಾನ ಮತ್ತು ಐತಿಹಾಸಿಕ ಸ್ಥಳಗಳ ಪ್ರವಾಸೋದ್ಯಮಕ್ಕೆ ಇನ್ನಷ್ಟು ಆದ್ಯತೆ ನೀಡಬೇಕಿದೆ. ಈ ಎಲ್ಲ ವಿಚಾರಗಳ ಬಗ್ಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಚಿಸಿದ ಸಮಿತಿಯಲ್ಲಿ ಚರ್ಚಿಸಲಾಗುವುದು. ಈ ಸಮಿತಿಗೆ ಮೊದಲ ಹಂತದಲ್ಲಿ 500 ಕೋ.ರೂ. ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಈ ಅನುದಾನದಲ್ಲಿ ಕರಾವಳಿ ಪ್ರದೇಶದ ಪ್ರವಾಸಿ ತಾಣಗಳನ್ನೂ ಅಭಿವೃದ್ಧಿ ಮಾಡಲಾಗುವುದು ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರಿನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನಗರ ಸುತ್ತಲಿನ ಆರು ಕುದ್ರುಗಳನ್ನು ಅಭಿವೃದ್ಧಿ ಮಾಡುವ ಕನಸಿದೆ. ಆರು ಕುದ್ರುಗಳ ಪೈಕಿ 3 ಬಂದರು ಇಲಾಖೆ, ಉಳಿದ 3 ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿದೆ. ಈ ಕುದ್ರುಗಳ ಅಭಿವೃದ್ಧಿಗೆ ಸಂಬಂಧಿಸಿ ಈಗಾಗಲೇ 3 ಸುತ್ತಿನ ಸಭೆ ನಡೆದಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಕುದ್ರುಗಳ ಅಭಿವೃದ್ಧಿಗೆ ನೆರವು ನೀಡಬೇಕಿದೆ. ಈ ಬಗ್ಗೆ ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಜತೆ ಚರ್ಚಿಸಲಾಗಿದೆ. ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ಸಚಿವ ರವಿ ತಿಳಿಸಿದ್ದಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸಲಾಗುವುದು ಎಂದರು.
ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್‌ಜೆಡ್ ನಿಯಮಾವಳಿ ಸಹಿತ ವಿವಿಧ ಅಡ್ಡಿ ಎದುರಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಕಾನೂನು, ನಿಯಮಗಳ ತೊಡಕು, ನ್ಯಾಯಾಲಯದ ಆದೇಶದ ಸಮಸ್ಯೆ ಮುಂತಾದವುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧವಾಗಿದೆ. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಯಲ್ಲಿ ಉಂಟಾಗಿರುವ ಲೋಪ ಸರಿಪಡಿಸಲಾಗುವುದು ಎಂದರು.
ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ದ.ಕ. ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಕುಡ್ಪಿ ಜಗದೀಶ ಶೆಣೈ, ಕೆಸಿಸಿಐ ಅಧ್ಯಕ್ಷ ಐಸಾಕ್ ವಾಜ್ ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಉದಯ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.











