ಆದೇಶ ಪಾಲಿಸದಿದ್ದರೆ ಬಿಜೆಪಿಗೂ ತಕ್ಕ ಉತ್ತರ, ಎಚ್ಚರಿಕೆ: ಮಲ್ಪೆ ಫಿಶರ್‌ಮೆನ್ಸ್ ಡೀಪ್ ಸೀ ಟ್ರಾಲ್ ಬೋಟ್ ಅಸೋಸಿಯೇಶನ್
ಅಕ್ರಮ ಮೀನುಗಾರಿಕೆ ನಿಷೇಧ ಆದೇಶ ಪಾಲನೆಗೆ ಮನವಿ

ಉಡುಪಿ, ಸೆ.27: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊರಡಿಸಿರುವ ಅಕ್ರಮ ಮೀನುಗಾರಿಕೆ ನಿಷೇಧ ಆದೇಶವನ್ನು ಪಾಲನೆ ಮಾಡುವಂತೆ ಆಗ್ರಹಿಸಿ ಮಲ್ಪೆ ಫಿಶರ್‌ಮೆನ್ಸ್ ಡೀಪ್ ಸೀ ಟ್ರಾಲ್ ಬೋಟ್ ಅಸೋಸಿಯೇಶನ್‌ನ ಮುಖಂಡರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಮನವಿ ಸಲ್ಲಿಸಿದರು.
ಮಣಿಪಾಲದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವ ಪ್ರವಾಸೋ ದ್ಯಮ ದಿನಾಚರಣೆಯಲ್ಲಿ ಭಾಗಿಯಾಗಿದ್ದ ಸಚಿವರನ್ನು ಸಭಾಂಗಣದ ಹೊರಗೆ ಭೇಟಿಯಾದ ಮೀನುಗಾರರು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಟ್ಟು ಹಿಡಿದರು.
‘ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವೈಜ್ಞಾನಿಕ ಬೆಳಕು ಮತ್ತು ಬುಲ್‌ಟ್ರಾಲ್ ಮೀನುಗಾರಿಕೆಯನ್ನು ಕಡ್ಡಾಯವಾಗಿ ನಿಷೇಧಿಷಿ ಆದೇಶ ಹೊರಡಿಸಿದೆ. ಪ್ರಸ್ತುತ ಸರಕಾರದಿಂದ ಕಾನೂನು ಪಾಲನೆ ಆಗದೇ ಅಕ್ರಮ ಮೀನುಗಾರಿಕೆ ನಡೆಯುತ್ತಿದ್ದು, ಮತ್ಸ್ಯಕ್ಷಾಮ ಉಂಟಾಗಿ ರಾಜ್ಯದ 18000 ನಾಡದೋಣಿ ಮೀನುಗಾರರು ಮತ್ತು 4500 ಯಾಂತ್ರೀಕೃತ ಬೋಟ್ ಮೀನುಗಾರರು ತುಂಬಾನೇ ನಷ್ಟ ಅನುಭವಿಸುತ್ತಿ ದ್ದಾರೆ. ಈ ನಿಟ್ಟಿನಲ್ಲಿ ಸರಕಾರದ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಿ ಮತ್ಸ್ಯಕ್ಷಾಮದಿಂದ ಮೀನುಗಾರರನ್ನು ಪಾರು ಮಾಡಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಮೀನುಗಾರರು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರನ್ನು ಭೇಟಿಯಾಗಿ ಸಮಸ್ಯೆಯ ಮನವರಿಕೆ ಮಾಡಿದರು. ಈ ವೇಳೆ ಕೆಲ ಕಾಲ ಮಾತಿನ ಚಕಮಕಿ ನಡೆದು ಲಾಲಾಜಿ ಆರ್. ಮೆಂಡನ್‌ರನ್ನು ಘೆರಾವ್ ಹಾಕಿದರು. ಜಿಲ್ಲಾಧಿಕಾರಿ ಜಿ. ಜಗದೀಶ್ ಅವರನ್ನು ಭೇಟಿಯಾಗಿ ಸಮಸ್ಯೆ ಯನ್ನು ತಿಳಿಸಿದರು. ಅವರ ಕಾರಿನ ಬಳಿ ನಿಂತು ಸಮಸ್ಯೆಯ ತೀವ್ರತೆ ಬಗ್ಗೆ ವಿವರಿಸಿದರು.
ಬಿಜೆಪಿಗೆ ಬುದ್ಧಿ ಕಲಿಸುತ್ತೇವೆ!
ಅವೈಜ್ಞಾನಿಕ ಬೆಳಕು ಮತ್ತು ಬುಲ್‌ಟ್ರಾಲ್ ಮೀನುಗಾರಿಕೆಯನ್ನು ಕಡ್ಡಾಯ ವಾಗಿ ನಿಷೇಧಿಸಿ ಆದೇಶವನ್ನು ಕಟ್ಟುನಿಟ್ಟಿನ ಪಾಲನೆ ಮಾಡದೇ ಹೋದ ಪರಿಣಾಮ ಹಿಂದಿನ ಆಳ್ವಿಕೆಯಲ್ಲಿ ಪ್ರಮೋದ್ ಮಧ್ವರಾಜ್ ಅವರನ್ನು ನಾವೆಲ್ಲ ಒಟ್ಟಾಗಿ ಸೋಲಿಸಿದ್ದೇವೆ. ಈ ಸರಕಾರ ಕೂಡಾ ಅತಂತ್ರದಲ್ಲಿದ್ದು, ಜನವರಿಯಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಗೂ ಬುದ್ಧಿ ಕಲಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಎಚ್ಚರಿಕೆ ಕೊಟ್ಟರು.









