ಪಾನ್‌ಕಾರ್ಡ್ ಇಲ್ಲದಿದ್ದರೆ ಇನ್ನು ಈ ಸೌಲಭ್ಯವಿಲ್ಲ

ಹೊಸದಿಲ್ಲಿ, ಸೆ.27: ಪಾನ್ ಖಾತೆ ಹೊಂದಿಲ್ಲದ ತೆರಿಗೆ ಪಾವತಿದಾರರು ಮುಂದಿನ ತಿಂಗಳಿನಿಂದ ಆರಂಭಗೊಳ್ಳುವ ಆನ್‌ಲೈನ್ ಮೂಲಕ ತೆರಿಗೆ ವಿಶ್ಲೇಷಣೆ ನಡೆಸುವ ಇ- ಅಸೆಸ್‌ಮೆಂಟ್ ವ್ಯವಸ್ಥೆ ಬಳಸುವಂತಿಲ್ಲ ಎಂದು ಕೇಂದ್ರ ನೇರತೆರಿಗೆ ಮಂಡಳಿ(ಸಿಬಿಡಿಟಿ) ಸೂಚಿಸಿದೆ. ದೇಶದಲ್ಲಿ ಅಕ್ಟೋಬರ್ 8ರಿಂದ ತೆರಿಗೆ ವಿಶ್ಲೇಷಣೆಗೆ ಮುಖರಹಿತ ತೆರಿಗೆ ಪರಿಷ್ಕರಣೆ ವ್ಯವಸ್ಥೆ ಜಾರಿಗೆ ಬರಲಿದೆ. ತೆರಿಗೆ ಇಲಾಖೆ ದಾಳಿ ನಡೆಸಿದ ಪ್ರಕರಣಗಳನ್ನು ‘ವಿಶೇಷ ಪ್ರಕರಣ’ದಡಿ ಗುರುತಿಸಿ ಅವನ್ನೂ ಇ-ಅಸೆಸ್‌ಮೆಂಟ್ ವ್ಯವಸ್ಥೆಯಿಂದ ಹೊರಗಿಡಲಾಗುವುದು ಎಂದು ಸಿಬಿಡಿಟಿಯ ಆದೇಶದಲ್ಲಿ ತಿಳಿಸಲಾಗಿದೆ.
ಆದಾಯ ತೆರಿಗೆ ಇಲಾಖೆಯ ಕಾರ್ಯನೀತಿಯನ್ನು ರೂಪಿಸುವ ಸಿಬಿಡಿಟಿ ಈ ಕುರಿತ ಸುತ್ತೋಲೆಯನ್ನು ಗುರುವಾರ ಹೊರಡಿಸಿದೆ. ಕಾಗದ ಪತ್ರದ ಮೂಲಕ ಆದಾಯತೆರಿಗೆ ರಿಟರ್ನ್ಸ್ ಸಲ್ಲಿಸಿದ ಪ್ರಕರಣ ಹಾಗೂ ತೆರಿಗೆ ಪಾವತಿದಾರರು ಪಾನ್‌ಕಾರ್ಡ್ ಹೊಂದಿಲ್ಲದ ಪ್ರಕರಣಗಳನ್ನು ಪಾನ್ ಕಾರ್ಡ್ ಇಲ್ಲದ ಪ್ರಕರಣ ಎಂದು ಪರಿಗಣಿಸಲಾಗುವುದು. ಆಡಳಿತಾತ್ಮಕ ಸಮಸ್ಯೆಯಿರುವ ಪ್ರಕರಣ, ಸಂಕೀರ್ಣ ಪ್ರಕರಣ ಅಥವಾ ವಿಶೇಷ ಪ್ರಕರಣಗಳಿಗೆ ಹೊಸ ವ್ಯವಸ್ಥೆಯಿಂದ ವಿನಾಯಿತಿ ಇರಲಿದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಇ-ಅಸೆಸ್‌ಮೆಂಟ್ ವ್ಯವಸ್ಥೆಯಲ್ಲಿ ತೆರಿಗೆದಾರರು ಆದಾಯ ತೆರಿಗೆ ಅಧಿಕಾರಿಗಳು ಕೇಳುವ ಯಾವುದೇ ಮಾಹಿತಿ ಅಥವಾ ನೋಟಿಸ್‌ಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಇ-ಫೈಲಿಂಗ್ ಖಾತೆಯ ಮೂಲಕ ಪ್ರತಿಕ್ರಿಯಿಸಬೇಕು ಎಂದು ಸುತ್ತೋಲೆ ತಿಳಿಸಿದೆ.







