ಕಾಶ್ಮೀರದಲ್ಲಿ ವಿವಿಧ ಭಾಗಗಳಲ್ಲಿ ಮತ್ತೆ ನಿರ್ಬಂಧ ಹೇರಿಕೆ

ಶ್ರೀಗನರ, ಸೆ. 27: ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಾಶ್ಮೀರದ ವಿವಿಧ ಭಾಗಗಳಲ್ಲಿ ಶುಕ್ರವಾರ ಹೊಸ ನಿರ್ಬಂಧ ಹೇರಲಾಗಿದೆ. ಕಣಿವೆಯಲ್ಲಿ ಮಾರುಕಟ್ಟೆಗಳು ಬಂದ್ ಆಗಿದ್ದವು. ಸರಕಾರಿ ಬಸ್‌ಗಳು ರಸ್ತೆಗಿಳಿಯಲ್ಲ. ಕಣಿವೆಯ ವಿವಿಧ ಭಾಗಗಳಲ್ಲಿ ಶುಕ್ರವಾರ ಬೆಳಗ್ಗಿನಿಂದ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದ ಕೆಳಪೇಟೆಯ (ಹೊರವಲಯ) ನೌಹಟ್ಟಾ, ರೈನವಾರಿ, ಸಫಕಡಲ್, ಖನ್ಯಾರ್, ಮಹಾರಾಜ ಗಂಜ್ ಹಾಗೂ ಹಝ್ರತ್‌ಬಾಲ್ ವಲಯದ ಐದು ಪೊಲೀಸ್ ಠಾಣೆ ಪ್ರದೇಶಗಳಲ್ಲಿ ನಿರ್ಬಂಧ ಹೇರಲಾಗಿತ್ತು. ಕಣಿವೆಯ ಗಂದೇರ್ಬಾಲ್, ಅನಂತ್‌ನಾಗ್, ಅವಂತಿಪೋರಾ, ಸೋಪೊರೆ ಹಾಗೂ ಹಂದ್ವಾರ ಪಟ್ಟಣಗಳಲ್ಲಿ ಕೂಡ ನಿರ್ಬಂಧ ಹೇರಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ನಗರದ ವಾಣಿಜ್ಯ ಕೇಂದ್ರವಾಗಿರುವ ಲಾಲ್‌ಚೌಕ ನಗರ ಕೇಂದ್ರಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಎಲ್ಲ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಮೂಲಕ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು.
ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕೆ ಕ್ರಮವಾಗಿ ನಿರ್ಬಂಧ ಹೇರಲಾಗಿತ್ತು. ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಆಗಸ್ಟ್ 5ರಂದು ಕಾಶ್ಮೀರದಲ್ಲಿ ನಿರ್ಬಂಧ ಹೇರಲಾಗಿತ್ತು. ಪರಿಸ್ಥಿತಿ ಸುಧಾರಿಸಿದಂತೆ ಕಣಿವೆಯ ವಿವಿಧ ಭಾಗಗಳಲ್ಲಿ ನಿರ್ಬಂಧ ಹಿಂದೆಗೆಯಲಾಗಿತ್ತು. ಆದರೆ, ಆಡಳಿತ ಪ್ರತಿ ಶುಕ್ರವಾರ ಅಹಿತಕರ ಘಟನೆಗಳು ನಡೆಯಲು ಸಾಧ್ಯತೆ ಇರುವ ಪ್ರದೇಶಗಳಲ್ಲಿ ನಿರ್ಬಂಧ ಹೇರುತ್ತಿದೆ ಎಂದು ಅವರು ತಿಳಿಸಿದ್ದಾರೆ. ಒಂದು ತಿಂಗಳಿಂದ ಕಣಿವೆಯಲ್ಲಿರುವ ಪ್ರಮುಖ ಮಸೀದಿಗಳಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿಲ್ಲ. ನಿರ್ಬಂದ ಹೇರಿದ 54ನೇ ದಿನವಾದ ಶುಕ್ರವಾರ ಮಾರುಕಟ್ಟೆ ಹಾಗೂ ಇತರ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದುದರಿಂದ ಕಾಶ್ಮೀರದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಉತ್ತರದ ಹಂದ್ವಾರ ಹಾಗೂ ಕುಪ್ವಾರ ಹೊರತುಪಡಿಸಿ ಕಾಶ್ಮೀರದ ಇತರ ಎಲ್ಲ ಭಾಗಗಳಲ್ಲಿ ಮೊಬೈಲ್ ಸೇವೆ ರದ್ದುಗೊಳಿಸಲಾಗಿದೆ. ಇಂಟರ್‌ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







