ಕೊರಿಯಾ ಓಪನ್: ಕಶ್ಯಪ್ ಸೆಮಿಫೈನಲ್‌ಗೆ ಲಗ್ಗೆ

ಇಂಚಿಯಾನ್, ಸೆ.27:ಭಾರತದ ಹಿರಿಯ ಶಟ್ಲರ್ ಪಾರುಪಲ್ಲಿ ಕಶ್ಯಪ್ ಕೊರಿಯಾ ಓಪನ್ ವರ್ಲ್ಡ್ ಟೂರ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಡೆನ್ಮಾರ್ಕ್ ನ ಜಾನ್ ಒ’ಜೊರ್ಗೆನ್ಸನ್‌ರನ್ನು ನೇರ ಗೇಮ್‌ಗಳಿಂದ ಮಣಿಸುವ ಮೂಲಕ ಸೆಮಿ ಫೈನಲ್‌ಗೆ ತಲುಪಿದರು.
ಇಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್‌ನಲ್ಲಿ ಹೈದರಾಬಾದ್‌ನ 33ರ ಹರೆಯದ ಆಟಗಾರ ಕಶ್ಯಪ್ ವಿಶ್ವದ ನಂ.2ನೇ ಆಟಗಾರ ಜೊರ್ಗೆನ್ಸನ್‌ರನ್ನು 37 ನಿಮಿಷಗಳ ಹೋರಾಟದಲ್ಲಿ 24-22, 21-8 ಗೇಮ್‌ಗಳ ಅಂತರದಿಂದ ಮಣಿಸಿದರು. ಈ ಋತುವಿನಲ್ಲಿ ಎರಡನೇ ಬಾರಿ ಸೆಮಿ ಫೈನಲ್ ತಲುಪಿದರು. ಇಂಡಿಯಾ ಓಪನ್ ಸೂಪರ್ 500 ಟೂರ್ನಮೆಂಟ್‌ನಲ್ಲಿ ಕೊನೆಯ ಬಾರಿ ಅಂತಿಮ-4ರ ಹಂತ ತಲುಪಿದ್ದರು.
2014ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ಶನಿವಾರ ನಡೆಯುವ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ, ಎರಡು ಬಾರಿಯ ಚಾಂಪಿಯನ್ ಜಪಾನ್‌ನ ಕೆಂಟೊ ಮೊಮೊಟಾರನ್ನು ಎದುರಿಸಲಿದ್ದಾರೆ.
ಅರ್ಹತಾ ಸುತ್ತಿನಿಂದ ಭಡ್ತಿ ಪಡೆದು ಬಂದಿದ್ದ ಮಾಜಿ ವಿಶ್ವದ ನಂ.6ನೇ ಆಟಗಾರ ಕಶ್ಯಪ್ ಐದು ವರ್ಷಗಳ ಹಿಂದೆ ಡೆನ್ಮಾರ್ಕ್ ಓಪನ್‌ನಲ್ಲಿ ಜೊರ್ಗೆನ್ಸನ್‌ರನ್ನು ಕೊನೆಯ ಬಾರಿ ಎದುರಿಸಿದ್ದರು. ಈ ಪಂದ್ಯಕ್ಕಿಂತ ಮೊದಲು ಜೊರ್ಗೆನ್ಸನ್ ವಿರುದ್ಧ 2-4 ದಾಖಲೆ ಹೊಂದಿದ್ದರು. ಮೊದಲ ಗೇಮ್‌ನಲ್ಲಿ ಉಭಯ ಆಟಗಾರರ ಮಧ್ಯೆ ತೀವ್ರ ಪೈಪೋಟಿ ಕಂಡುಬಂದಿತು. ಮಧ್ಯಂತರದಲ್ಲಿ ಕಶ್ಯಪ್ 14-12 ಮುನ್ನಡೆಯಲ್ಲಿದ್ದರು. ಇಬ್ಬರು ಆಟಗಾರರು 14-14, 18-18 ಹಾಗೂ 19-19 ರಿಂದ ಸಮಬಲ ಸಾಧಿಸಿದರು. 22 ನಿಮಿಷಗಳ ಕಾಲ ನಡೆದ ಮೊದಲ ಗೇಮ್‌ನಲ್ಲಿ ಕಶ್ಯಪ್ 24-22 ಅಂತರದಿಂದ ರೋಚಕ ಜಯ ದಾಖಲಿಸಿದರು.
ಎರಡನೇ ಗೇಮ್‌ನ ಆರಂಭದಲ್ಲಿ ಉಭಯ ಆಟಗಾರರು 3-3ರಿಂದ ಸಮಬಲ ಸಾಧಿಸಿದರು. ಆ ಬಳಿಕ ಹಿಡಿತ ಸಾಧಿಸಿದ ಕಶ್ಯಪ್ ತನ್ನ ತಪ್ಪನ್ನು ಕಡಿಮೆಗೊಳಿಸಿ ಸತತ 5 ಅಂಕ ಗಳಿಸಿದರು. ಜೊರ್ಗೆನ್ಸನ್ ವೇಗದ ಆಟಕ್ಕೆ ಯತ್ನಿಸಿದರು. ಆದರೆ, ಅನಗತ್ಯ ತಪ್ಪೆಸಗಿದರು. ವಿರಾಮದ ವೇಳೆಗೆ ಕಶ್ಯಪ್ 11-7 ಮುನ್ನಡೆ ಸಾಧಿಸಿದರು. ವಿರಾಮದ ಬಳಿಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕಶ್ಯಪ್ 10 ಅಂಕಗಳ ಪೈಕಿ 9 ಅಂಕ ಗಳಿಸಿದರು. 21-8 ಅಂತರದಿಂದ ಎರಡನೇ ಗೇಮ್‌ನ್ನು ಗೆದ್ದುಕೊಂಡು ಪಂದ್ಯವನ್ನು ವಶಪಡಿಸಿಕೊಂಡರು.







