ಒಂಟಿ ಮಹಿಳೆಯ ಕೊಲೆ ಪ್ರಕರಣ: ಒಂಭತ್ತು ಆರೋಪಿಗಳ ಬಂಧನ

ಬೆಂಗಳೂರು, ಸೆ.27: ಒಂಟಿ ಮಹಿಳೆಯ ಕೊಲೆ ಪ್ರಕರಣ ಸಂಬಂಧ ಒಂಭತ್ತು ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾಬಸ್ ಪೇಟೆ ನಿವಾಸಿ ಮಹಂತಸ್ವಾಮಿ(23), ದೀಪಕ್(26), ಜ್ಞಾನಭಾರತಿ ನಿವಾಸಿ ಶರತ್(20), ಚಿತ್ರಲಿಂಗ (20), ಕುಮಾರ್(21), ಕಾರ್ತಿಕ್(19), ಲೋಕೇಶ್(21), ಗಂಗಾಧರ(23), ಗಣೇಶ್(24) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಸೆ.18ರ ರಾತ್ರಿ ಮುತ್ತುರಾಯಸ್ವಾಮಿ ಬಡಾವಣೆಯ 5ನೆ ಅಡ್ಡರಸ್ತೆಯ ಪಾರ್ವತಮ್ಮ(63) ಎಂಬವರನ್ನು ಆರೋಪಿಗಳು, ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಮಹಿಳೆಯು ಮೊದಲ ಮಹಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರೆ, ಮಗ ಕೆಳಗಿನ ಮನೆಯಲ್ಲಿ ವಾಸಿಸುತ್ತಿದ್ದರು.
ಎಲ್ಲ ಹಂತಗಳಲ್ಲಿ ತನಿಖೆ ಕೈಗೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ಪೈಕಿ ಮಹಂತಸ್ವಾಮಿ, ಕೊಲೆಯಾದ ಪಾರ್ವತಮ್ಮ ಅವರ ಸೊಸೆಯ ತಮ್ಮನಾಗಿದ್ದ. ಅತ್ತೆಯು ಒಂಟಿಯಾಗಿದ್ದು, ಆಕೆಯ ಬಳಿ ಚಿನ್ನಾಭರಣಗಳಿರುವುದನ್ನು ಗಮನಿಸಿ ಅದನ್ನು ದೋಚಲು ಇತರರೊಂದಿಗೆ ಗುಂಪು ಕಟ್ಟಿಕೊಂಡು ಮಲಗಿದ್ದ ಪಾರ್ವತಮ್ಮ ಅವರ ಕೈ-ಕಾಲು ಕಟ್ಟಿ, ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು ಎನ್ನಲಾಗಿದೆ.
ಬಂಧಿತರಲ್ಲಿ ಲೋಕೇಶ್ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದರೆ, ಗಣೇಶ ದರೋಡೆ ಕೃತ್ಯದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಇವರ ಬಳಿಯಿದ್ದ 2 ಚಿನ್ನದ ಸರ, 2 ಉಂಗುರ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







