ರೌಡಿ ಕೊಲೆ ಪ್ರಕರಣ: ಮೂವರ ಬಂಧನ

ಬೆಂಗಳೂರು, ಸೆ.27: ರೌಡಿ ಕೊಲೆ ಪ್ರಕರಣ ಸಂಬಂಧ ಮೂವರನ್ನು ಇಲ್ಲಿನ ಯಲಹಂಕ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಲಹಂಕದ ಮನವರ್ತಿ ತೋಟದ ಚಾಂದ್‌ಪಾಷ (40),ಧನಂಜಯ್ (30), ನವೀನ್ ಯಾದವ್ (20) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಯಲಹಂಕದ ಮಾರುತಿ ನಗರದ ರೌಡಿ ದಿಲೀಪ್ ಅನ್ನು ಸೆ.23ರ ತಡರಾತ್ರಿ ಕೊಂಡಪ್ಪಲೇಔಟ್ ಮುಖ್ಯರಸ್ತೆಯ ಸಾಯಿ ಕಾಂಡಿಮೆಂಟ್ ಬೇಕರಿ ಬಳಿ ದುಷ್ಕರ್ಮಿಗಳು ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಯಲಹಂಕ ಪೊಲೀಸರು ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೊಲೆ ಕೃತ್ಯವೊಂದರಲ್ಲಿ ಭಾಗಿಯಾಗಿ, ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದ ರೌಡಿ ದಿಲೀಪ್ (32), ಆರೋಪಿ ಚಾಂದ್‌ಪಾಷನಿಂದ ಬಾಡಿಗೆಗೆ ಆಟೊ ಪಡೆದುಕೊಂಡಿದ್ದ, ಹಲವು ದಿನಗಳು ಕಳೆದರೂ ಬಾಡಿಗೆಗೆ ಪಡೆದ ಹಣ ನೀಡದೆ ಸತಾಯಿಸಿದ್ದ. ಹಣ ಕೇಳಲು ಹೋದರೆ ತಕರಾರು ಮಾಡುತ್ತಿದ್ದು, ನೀನು ಯಾವಾಗಲೂ ಬಾಡಿಗೆ ಹಣ ಕೇಳಿದರೆ ಕೊಲೆ ಮಾಡುವುದಾಗಿ ಚಾಂದ್‌ಪಾಷನಿಗೆ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ.
ಇದರಿಂದ ಆತಂಕಗೊಂಡ ಚಾಂದ್ ಪಾಷ, ದಿಲೀಪನ ಕೊಲೆಗೆ ಸಂಚು ರೂಪಿಸಿ ಕೊಲೆ ಆರೋಪಿಗಳೊಂದಿಗೆ ಗುಂಪು ಕಟ್ಟಿಕೊಂಡು ಕೊಲೆ ಮಾಡಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





