ಬಿಡಿಎ ಕಾರ್ಯಾಚರಣೆ: 80 ಲಕ್ಷ ರೂ. ಮೌಲ್ಯದ ಆಸ್ತಿ ವಶ
ಬೆಂಗಳೂರು, ಸೆ.27: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಜೆ.ಪಿ ನಗರ ಬಡಾವಣೆಯಲ್ಲಿ ಕಾರ್ಯಾಚರಣೆ ನಡೆಸಿ 80 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಶುಕ್ರವಾರ ಮರು ವಶಪಡಿಸಿಕೊಂಡಿದೆ.
ಜೆಪಿ ನಗರ 1ನೇ ಹಂತ ಬಡಾವಣೆಯ 50 ಚದರ ಮೀಟರ್ ಪ್ರದೇಶದ ನಿವೇಶನ ಸಂಖ್ಯೆ 720ಎ ನಲ್ಲಿ ತಲೆ ಎತ್ತಿದ್ದ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿ ಉದ್ಯಾನವನದ ನಿರ್ವಹಣೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರ ಗೊಳಿಸಲಾಗಿದೆ ಹಾಗೂ ಜೆಪಿ ನಗರ 6ನೇ ಹಂತ ಬಡಾವಣೆಯ ನಿವೇಶನ ಸಂಖ್ಯೆ 660ರಲ್ಲಿ ತಲೆ ಎತ್ತಿದ್ದ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿ ಪ್ರಾಧಿಕಾರಕ್ಕೆ ಸೇರಿದ 72 ಚದರ ಮೀಟರ್ ಪ್ರದೇಶದ 80 ಲಕ್ಷ ರೂ. ಆಸ್ತಿಯನ್ನು ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಂಡಿದೆ.
ಆಯುಕ್ತರ ಆದೇಶದ ಮೇರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರ ನೇತೃತ್ವದಲ್ಲಿ ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರು, ಬಿಡಿಎ ಇವರುಗಳನ್ನು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ.