ಮರ್ಕರಮ್ ಶತಕ, ಬವುಮಾ ಅರ್ಧಶತಕ: ಆಫ್ರಿಕಾ 199/4
ಅಧ್ಯಕ್ಷರ ಇಲೆವೆನ್ ವಿರುದ್ಧದ ಅಭ್ಯಾಸ ಪಂಧ್ಯ

ವಿಜಯನಗರ, ಸೆ.27: ಏಡೆನ್ ಮರ್ಕರಮ್ ಶತಕ ಮತ್ತು ಟೆಂಬಾ ಬವುಮಾ ಅರ್ಧಶತಕಗಳ ಕೊಡುಗೆಯ ನೆರವಿನಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ಉತ್ತಮ ಮೊತ್ತ ದಾಖಲಿಸಿದೆ.
ಅಭ್ಯಾಸ ಪಂದ್ಯದ ಮೊದಲ ದಿನವಾದ ಗುರುವಾರ ಮಳೆಗಾಹುತಿಯಾಗಿತ್ತು. ಎರಡನೇ ದಿನ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 199 ರನ್ ಗಳಿಸಿದೆ.
ಮರ್ಕರಮ್ ಭಾರತ ಪ್ರವಾಸದಲ್ಲಿ ಎರಡನೇ ಶತಕ ದಾಖಲಿಸಿದ್ದಾರೆೆ. ಕಳೆದ ತಿಂಗಳು ಭಾರತ ಎ ವಿರುದ್ಧ ದ. ಆಫ್ರಿಕ ಎ ತಂಡದಲ್ಲಿ 161 ರನ್ ದಾಖಲಿಸಿದ್ದರು. ಇದೀಗ ಇನ್ನೊಂದು ಶತಕ ಬಾರಿಸಿ ಮುಂಬರುವ ಟೆಸ್ಟ್ ಗೆ ಭರ್ಜರಿ ತಯಾರಿ ನಡೆಸಿದ್ದಾರೆ.
ಮರ್ಕರಮ್ 118 ಎಸೆತಗಳಲ್ಲಿ 18 ಬೌಂಡರಿ ಮತ್ತು 2 ಸಿಕ್ಸರ್‌ಗಳಿರುವ 100 ರನ್ ದಾಖಲಿಸಿ ಗಾಯಾಳುವಾಗಿ ಪಂದ್ಯದಿಂದ ನಿವೃತ್ತರಾದರು. ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ಎ ತಂಡ 12.3 ಓವರ್‌ಗಳಲ್ಲಿ 33 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕೈ ಚೆಲ್ಲಿತ್ತು. ನಾಯಕ ಮರ್ಕರಮ್ ಜೊತೆ ಇನಿಂಗ್ಸ್ ಆರಂಭಿಸಿದ ಡೀನ್ ಎಲ್ಗರ್ (6) ಅವರು ಉಮೇಶ ಯಾದವ್ ಎಸೆತದಲ್ಲಿ ಪಾಂಚಾಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಎಲ್ಗರ್ ನಿರ್ಗಮನದ ಬಳಿಕ ಥೆವುನಿಸ್ ಡಿ ಬ್ರುಯನ್ (6) ಆಗಮಿಸಿದರು. ಆದರೆ ಅವರಿಗೆ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಅವರಿಗೆ ಇಶಾನ್ ಪೊರೆಲ್ ಪೆವಿಲಿಯನ್ ಹಾದಿ ತೋರಿಸಿದರು.
ಝುಬೈರ್ ಹಂಝಾ ಅವರು 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 22 ರನ್ ಗಳಿಸಿ ಎಡಗೈ ಸ್ಪಿನ್ನರ್ ಧರ್ಮೆಂದ್ರಸಿನ್ಹಾ ಜಡೇಜ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ನಿರ್ಗಮಿಸಿದರು. ಕೊನೆಯಲ್ಲಿ ಎಫ್ ಡು ಪ್ಲೆಸಿಸ್ (9) ಅವರನ್ನು ಜಡೇಜ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಟೆಂಬಾ ಬಹುಮಾ 55 ರನ್(92ಎ, 9ಬೌ) ಗಳಿಸಿ ಔಟಾಗದೆ ಉಳಿದರು.
ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದ ಪರ ಧರ್ಮೆಂದ್ರ ಸಿನ್ಹಾ ಜಡೇಜ 52ಕ್ಕೆ 2 ವಿಕೆಟ್, ಉಮೇಶ್ ಯಾದವ್ 31ಕ್ಕೆ 1 ಮತ್ತು ಇಶಾನ್ ಪೊರೆಲ್ 11ಕ್ಕೆ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
► ದ.ಆಫ್ರಿಕಾ 50 ಓವರ್‌ಗಳಲ್ಲಿ 199/4
(ಮರ್ಕರಮ್ ಗಾಯಗೊಂಡು ನಿವೃತ್ತಿ 100, ಬವುಮಾ ಔಟಾಗದೆ 55, ಹಂಝಾ 22; ಧರ್ಮೇಂದ್ರ ಜಡೇಜ 52ಕ್ಕೆ 2,)







